Friday, April 18, 2025
Google search engine

Homeರಾಜ್ಯಸುದ್ದಿಜಾಲವಿದ್ಯುತ್ ಸಂಪರ್ಕ-ಮೂಲಭೂತ ಸೌಕರ್ಯದೊಂದಿಗೆ ಮನೆಗಳ ಹಂಚಿಕೆ : ಬಲ್ಕೀಶ್ ಬಾನು

ವಿದ್ಯುತ್ ಸಂಪರ್ಕ-ಮೂಲಭೂತ ಸೌಕರ್ಯದೊಂದಿಗೆ ಮನೆಗಳ ಹಂಚಿಕೆ : ಬಲ್ಕೀಶ್ ಬಾನು

ಶಿವಮೊಗ್ಗ: ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ಅಗತ್ಯವಿರುವ ವಿದ್ಯುತ್ ಮತ್ತು ನೀರಿನ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗುವುದು ಎಂದು ವಿಧಾನಪರಿಷತ್ ಶಾಸಕರಾದ ಶ್ರೀಮತಿ ಬಲ್ಕೀಶ್ ಬಾನು ತಿಳಿಸಿದರು.

ಗೋವಿಂದಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ವಸತಿ ಸಮುಚ್ಚಯವನ್ನು ಮಹಾನಗರಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿ, ಇಂಜಿನಿಯರ್ ಗಳಿಗೆ ಸೂಕ್ತಸಲಹೆ- ಸೂಚನೆ ನೀಡಿದರು. ಮಹಾನಗರಪಾಲಿಕೆಯ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗೋವಿಂದಾಪುರದಲ್ಲಿ ಒಟ್ಟು ರೂ.260 ಕೋಟಿ ಅನುದಾನದಲ್ಲಿ 3000 ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಈಗಾಗಲೇ 624 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ 652 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಪರಿಶೀಲಿಸುತ್ತಾರೆ. ನಂತರ ವಸತಿ ಸಚಿವರ ಸಮ್ಮುಖದಲ್ಲೇ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಇಲ್ಲಿ 5 ಬೋರ್ ಮತ್ತು 3 ಟಿಸಿಯನ್ನು ತಾತ್ಕಾಲಿಕವಾಗಿ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರಿನ ವ್ಯವಸ್ಥೆ ಆಗುತ್ತಿದೆ.

ಸಮುಚ್ಚಯಗಳ ವಿದ್ಯುತ್ ಸಂಪರ್ಕಕ್ಕೆ ಅಗತ್ಯವಿರುವ ರೂ. 12 ಕೋಟಿ ಹಣವನ್ನು ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ, ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು. ಫೆಬ್ರವರಿ ವೇಳೆಗೆ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಗೋವಿಂದಾಪುರ ಅಗಸನಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಬರಲಿದ್ದು ಇಲ್ಲಿ ಪಕ್ಕದಲ್ಲಿಯೇ ಒಂದು ಕೆರೆ ಇದ್ದು ಅದನ್ನು ಸಹ ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಲಾಗಿದೆ. ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಇದು ಮಾದರಿ ಬಡಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಎನ್ ಸಿಸಿ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular