ಮೈಸೂರು: ನಗರದಲ್ಲಿ ಹಲವಾರು ವರ್ಷಗಳಿಂದ ವಿವಿಧ ಕಲೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಕಲಾವಿದರಿಗೆ ಉತ್ತೇಜನ ನೀಡಲು ತಲಾ ೧೦ ಸಾವಿರ ರೂ. ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ನಗರದ ಪುರಭವನದಲ್ಲಿ ಗುರುವಾರ ನಡೆದ ಪ್ರೋತ್ಸಾಹಧನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್ ಅವರು ಎಂ.ಎನ್.ಯದುಗಿರಿ, ಇಂದ್ರಾಣಿ, ವಸಂತಕೃಷ್ಣ, ಸತ್ಯವತಿ, ರಾಮಪ್ಪ, ಗುರುಸ್ವಾಮಿ, ವೀರಭದ್ರಸ್ವಾಮಿ ಅವರಿಗೆ ಸಾಂಕೇತಿಕವಾಗಿ ಚೆಕ್ ನೀಡಿದರು. ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, ನಗರಪಾಲಿಕೆ ವತಿಯಿಂದ ನಗರದ ವ್ಯಾಪ್ತಿಯಲ್ಲಿರುವ ಹೊಸದಾಗಿ ೧೪೪ ಕಲಾವಿದರಿಗೆ ೧೦ ಸಾವಿರ ರೂ.ಗಳನ್ನು ನೇರವಾಗಿ ಚೆಕ್ ಮೂಲಕ ವಿತರಿಸಲಾಗುತ್ತಿದೆ. ಅದೇ ರೀತಿ ಈ ಹಿಂದೆ ಪ್ರೋತ್ಸಾಹಧನ ಪಡೆದಿರುವವರಿಗೂ ನಿರಂತರವಾಗಿ ಮುಂದುವರಿಸಲಾಗುವುದು. ಅಂತಹ ೧೧೦ ಕಲಾವಿದರಿಗೆ ಆರ್‌ಟಿಜಿಎಸ್ ಮೂಲಕ ಜಮಾ ಮಾಡಲಾಗುವುದು ಎಂದು ಹೇಳಿದರು.
ಹೊಸ ಕಲಾವಿದರಿಗೆ ಪ್ರೋತ್ಸಾಹಧನ ನೀಡಿ ಸುಮ್ಮನಾಗುವ ಬದಲಿಗೆ ನಿರಂತರವಾಗಿ ವರ್ಷಕ್ಕೊಮ್ಮೆ ಪ್ರೋತ್ಸಾಹಧನ ಕೊಡಬೇಕು ಎಂಬುದು ನನ್ನ ಭಾವನೆ. ಮೈಸೂರು ಸಂಸ್ಥಾನದ ಆಡಳಿತ ಇದ್ದಾಗ ಕಲೆ ಹಾಗೂ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ, ಕಲಾವಿದರಿಗೆ ಪ್ರೋತ್ಸಾಹ ನೀಡಲು ೨೦೧೨-೧೩ರಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಹಣ ಮೀಸಲಿಟ್ಟು ಯೋಜನೆ ಪ್ರಾರಂಭಿಸಲಾಗಿತ್ತು. ನಂತರದ ವರ್ಷಗಳಲ್ಲಿ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈಗ ನಿರಂತರವಾಗಿ ಮುಂದುವರಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಮೊದಲ ಕಂತಿನಲ್ಲಿ ೧೪೪ ಕಲಾವಿದರಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಕಲಾವಿದರಿಗೆ ಮಾನ್ಯತೆ ಕಡಿಮೆಯಾಗುತ್ತಿದ್ದು, ಜನರು ಹಾಗೂ ಸಮಾಜ ಬೆನ್ನಿಗೆ ನಿಲ್ಲಬೇಕು. ಅನಾದಿ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಕಲೆಗಳು ಮತ್ತು ಕಲಾವಿದರನ್ನು ಬೆಳೆಸಬೇಕು. ಹೀಗಾಗಿ ಪಾಲಿಕೆಯಿಂದ ೨೫ ಲಕ್ಷ ಅನುದಾನ ಮೀಸಲಿಟ್ಟಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಡಾ.ಜಿ.ರೂಪ ಯೋಗೇಶ್, ಹೆಚ್ಚುವರಿ ಆಯುಕ್ತೆ ಎಂ.ಜಿ.ರೂಪಾ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ನಾಗರಾಜು, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಮೇಶ್, ಪಟ್ಟಣ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಎಚ್.ಎಂ.ಶಾಂತಕುಮಾರಿ, ಪಾಲಿಕೆ ಸದಸ್ಯರಾದ ಮ.ವಿ.ರಾಮ ಪ್ರಸಾದ್, ಬಿ.ವಿ.ಮಂಜುನಾಥ್ ಹಾಜರಿದ್ದರು.