ಮೈಸೂರು: ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ ಅಂಗವಾಗಿ ಜಯನಗರದ ಪಟ್ಟಾಭಿ ರಾಮಮಂದಿರದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದಿಂದ 80ಕ್ಕೂ ಹೆಚ್ಚು ಬ್ರಾಹ್ಮಣರಿಗೆ ಉಪಾಕರ್ಮಕ್ಕೆ ಯಜ್ಞೋಪವೀತ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್.ಗಣೇಶ್ ರವರು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿದಾನಂ ಅವರು ತಿಳಿಸಿದಂತೆ ಬ್ರಾಹ್ಮಣರಿಗೆ ಸಂಧ್ಯಾವಂದನೆಯೇ ಅತ್ಯಂತ ಪ್ರಮುಖವಾದುದು ಹೇಳಿದ ಅನುಗ್ರಹ ಸಂದೇಶವನ್ನು ಸ್ವೀಕರಿಸಿ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ಕೀರ್ತಿಶೇಷ ಗುಂಡಪ್ಪನವರ ಹೆಸರಿನಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಎಂದು ಸ್ಥಾಪಿಸಿ ಅದರ ಮೂಲಕ ಸಾಮಾಜಿಕ ಚಟುವಟಿಕೆ ಮಾಡಲು ಸಂಕಲ್ಪಿಸಿದೆ ಎಂದರು.
ಚಾಮರಾಜನಗರ, ಮೈಸೂರು ಹಾಗೂ ಚಾಮರಾಜನಗರದಲ್ಲಿ ಮುಂಬರುವ ಋಗುಪಾಕರ್ಮ ಹಾಗೂ ಯಜುರ್ವೇದ ಉಪಾಕರ್ಮ ಪ್ರಯುಕ್ತ ಬ್ರಾಹ್ಮಣರಿಗೆ ಯಜ್ಞೋಪವೀತ, ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶಾರದಾ ಮಾತೆಯ ಭಾವಚಿತ್ರ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಸಹ ಪ್ರತಿ ನಿತ್ಯ ಸಂಧ್ಯಾವಂದನೆ ಹಾಗೂ ಗಾಯತ್ರಿ ಜಪವನ್ನು ಮಾಡಬೇಕು. ಜಪ ತಪ ಧ್ಯಾನಗಳನ್ನು ಮಾಡುವುದರಿಂದ ಮನಸ್ಸನ್ನು ನಿಯಂತ್ರಣ ಮಾಡಬಹುದು ಇಂದಿನ ಕಾಲದ ಔದ್ಯೋಗಿಕ ಹಾಗೂ ಸಾಮಾಜಿಕ ಒತ್ತಡಗಳಿಂದ ಸುಲಭವಾಗಿ ಹೊರಬರಲು ದೇಹ ಮತ್ತು ಮನಸ್ಸನ್ನು ಪ್ರಶಾಂತತೆ ಇಂದ ಇಡಲು ಸಂಧ್ಯಾವಂದನೆ ಅತ್ಯಂತ ಸಹಕಾರಿ. ಮನೆಯ ಮಕ್ಕಳಿಗೆ ನಾವೇ ಮಾದರಿ ನಾವು ಎಷ್ಟು ಧರ್ಮ ನಿಷ್ಠರಾಗಿ ಇರುತ್ತೇವೋ ಅದನ್ನೇ ಮಕ್ಕಳು ಕಲಿಯುತ್ತಾರೆ , ನಾವು ಪೂಜೆ ಪುನಸ್ಕಾರ ಸಂಸ್ಕಾರ ಸಂಸ್ಕೃತಿ ಗಳನ್ನು ಅಳವಡಿಸಿಕೊಂಡರೆ ಮನೆಯಲ್ಲಿ ಮಕ್ಕಳು ಸಹ ಕಲಿಯುತ್ತಾರೆ ನಮ್ಮ ಸಂಸ್ಕಾರಗಳು ಅವಿಚ್ಛಿನ್ನವಾಗಿ ಮುಂದುವರೆಯುತ್ತದೆ ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳ ಪರಿಚಯವೇ ಇಲ್ಲದಂತಾಗುತ್ತದೆ. ಧರ್ಮೋ ರಕ್ಷತಿ ರಕ್ಷಿತಾಃ ಎಂದು ಶಾಸ್ತ್ರ ಹೇಳುತ್ತದೆ ಅಂತಹ ಧರ್ಮವನ್ನು ನಾವು ದಿನನಿತ್ಯದ ಜೀವನದಲ್ಲಿ ಕಾಪಾಡಿಕೊಂಡರೆ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ, ಇಲ್ಲಿ ಧರ್ಮವೆಂದರೆ ಉತ್ತಮ ಜೀವನ ಶೈಲಿ, ಉತ್ತಮವಾದ ಜೀವನ ಶೈಲಿ ರೂಢಿಸಿಕೊಂಡರೆ ಆ ಜೀವನ ಶೈಲಿಯೇ ನಮ್ಮನ್ನು ಕಾಪಾಡುತ್ತದೆ ಎಂಬುದೇ ಇದರ ಅರ್ಥ. ಆದ್ದರಿಂದ ಅಗತ್ಯ ಉಪಾಕರ್ಮ ಸಾಮಾಗ್ರಿಗಳನ್ನು ಒಳಗೊಂಡ ಈ ಕಿಟ್ ಅನ್ನು ಬಳಸಿಕೊಂಡು ಉಪಾಕರ್ಮ ಆಚರಣೆ ಮಾಡಲು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವೇದ ಗುರುಗಳಾದ ಶಿವರಾಂ ರವರು ನಾವು ಬೆಳೆದ ಮೇಲೆ ಎಷ್ಟೊ ಸಣ್ಣ ವಿಚಾರಗಳನ್ನು ಮರೆಯುತ್ತೇವೆ. ಯಾವುದು ಸಣ್ಣ ವಿಚಾರವೆಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುತ್ತೇವೊ ಅದೇ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ ಪೂಜೆ, ಸಂಧ್ಯಾವಂದನೆ, ಧ್ಯಾನ ಹಾಗೂ ಜಪ ನಮ್ಮ ನಿತ್ಯ ಕಾಯಕವಾಗಬೇಕು ಎಂದು ತಿಳಿಸಿದರು.
ಪ್ರತಿಷ್ಠಾನದ ಸಂಚಾಲಕರಾದ ಪುನೀತ್ ಮಾತನಾಡಿ, ಯುವಕರು ತಮ್ಮ ಶಿಕ್ಷಣ, ಹವ್ಯಾಸ, ಉದ್ಯೋಗದ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದು ಕೊಳ್ಳಬೇಕು. ಸನಾತಾನ ಸಂಸ್ಕೃತಿಯ ವಾರಸುದಾರರು ನಾವು ಯುವಕರು, ಧರ್ಮ, ಶಿಕ್ಷಣ,ಸಂಸ್ಕಾರ ವಿಚಾರಗಳನ್ನು ಜಗತ್ತಿಗೆ ತಿಳಿಸಲು ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಯಾವಾಗಲೂ ಸಿದ್ದವಾಗಿರುತ್ತದೆ ಎಂದು ತಿಳಿಸಿದರು.
ಬ್ರಾಹ್ಮಣ ಯುವ ವೇದಿಕೆ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ,ಬ್ರಾಹ್ಮಣರು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಹಿಂಜರಿಯ ಬಾರದು, ಬ್ರಾಹ್ಮಣ ಯುವ ವೇದಿಕೆ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ರಾಹ್ಮಣ ಸಮುದಾಯ ಇಂದು ಶಿಕ್ಷಣ, ಉದ್ಯೋಗದ ದೃಷ್ಟಿಯಿಂದ ವಲಸೆ ಹೋಗುತ್ತಿದ್ದಾರೆ ವಲಸೆ ಹೋದವರು ಮತ್ತೆ ಮರಳಿ ಬಂದು ಅವರಿಗೆ ಗ್ರಾಮ ಗಳಲ್ಲಿ ಅವರಿಗೆ ಇದ್ದ ಧಾರ್ಮಿಕ ಜವಾಬ್ದಾರಿ ಮುಂದುವರೆಸಲು ಆಗುತ್ತಿಲ್ಲ. ಇದರಿಂದ ಸ್ಥಳೀಯವಾಗಿ ಧಾರ್ಮಿಕ ಚಟುವಟಿಕೆಗಳು ನೆಡೆಸಲು ಬೇರೆ ಊರುಗಳಿಂದ ಬರಬೇಕಾದ ಪರಿಸ್ಥಿತಿ ಇದೆ. ಯುವಕರು ಶಿಕ್ಷಣದೊಂದಿಗೆ ವೇದಾಧ್ಯಯನ, ಆಗಮ, ಜ್ಯೋತಿಷ್ಯ, ಶಾಸ್ತ್ರ, ಪುರಾಣ ಗಳ ವಿಚಾರಗಳನ್ನು ಸಹ ತಿಳಿಯಬೇಕು. ಇದರಿಂದ ಮುಂದಿನ ತಲೆಮಾರಿಗೆ ನಾವು ಸನಾತನ ಸಂಸ್ಕೃತಿಯನ್ನು ಉಳಿಸಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಬ್ರಾಹ್ಮಣ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಪಿರಿಟ್ ಇವೆಂಟ್ ಮಾಲಿಕರು ಹಾಗೂ ಬ್ರಾಹ್ಮಣ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಹಾಗೂ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್. ಗಣೇಶ್, ನಿರಂಜನ್ ಕಾಶ್ಯಪ ಸಿಂಹ , ಪ್ರಸನ್ನ ಹಾಗೂ ಕೂಡ್ಲೂರು ಗುಂಡಪ್ಪ ರವರ ಕುಟುಂಬ ವರ್ಗ, ಜಯನಗರ ರಾಮಮಂದಿರದ ವೆಂಕಟೇಶ್ವರ ರಾವ್, ಶಿವರಾಂ, ಸುರೇಶ್, ವೇದ ಬಳಗದ ದತ್ತಣ್ಣ ಋಗ್ವೇದ, ಅವನಿ ಶಂಕರ ಮಠದ ನಾಗೇಂದ್ರ, ಪೃಥು ಪಿ ಅದ್ವೈತ್ ಸೇರಿ ಹಲವರು ಹಾಜರಿದ್ದರು.