ಪಿರಿಯಾಪಟ್ಟಣ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಒಂದು ವರ್ಗಕ್ಕೆ ಸೀಮಿತಗೊಳಿಸದೆ ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಪುರೋಹಿತರಾದ ಕೆ.ಎಸ್ ಷಣ್ಮುಖಾರಾಧ್ಯ ತಿಳಿಸಿದರು.
ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನೀಡಿದ್ದ ಶ್ರೀರಾಮ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಿತರಿಸಿ ಅವರು ಮಾತನಾಡಿದರು, ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯ ನಡೆಯುವುದರ ಅಂಗವಾಗಿ ದೇಶದಾದ್ಯಂತ ಮಂತ್ರಾಕ್ಷತೆ ವಿತರಿಸುವ ಕಾರ್ಯ ನಡೆಯುತ್ತಿದೆ, ಇದೊಂದು ಬೃಹತ್ ಹಿಂದೂ ಧಾರ್ಮಿಕ ಕಾರ್ಯವಾಗಿರುವುದರಿಂದ ಯಾವುದೇ ಒಂದು ಪಕ್ಷ ಅಥವಾ ವರ್ಗಕ್ಕೆ ಸೀಮಿತ ಮಾಡದೆ ಭಾರತೀಯರಾದ ನಾವೆಲ್ಲರೂ ಕೈಜೋಡಿಸುವ ಮೂಲಕ ನಮ್ಮ ಕೈಲಾದ ಸೇವೆ ಮಾಡಿ ಧರ್ಮ ಹಾಗೂ ರಾಷ್ಟ್ರ ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಸ್ವಯಂ ಸೇವಕ ಕೂರಗಲ್ಲು ಶಿವಶಂಕರ್ ಅವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮೂಲಕ ಸನಾತನ ಧರ್ಮ ನಮ್ಮ ಹೆಮ್ಮೆ ಎಂದು ಎಲ್ಲರಿಗೂ ಸಾರಿ ಹೇಳಬೇಕಿದೆ. ಬಹು ವರ್ಷಗಳ ಕೋಟ್ಯಂತರ ಭಾರತೀಯರ ಕನಸು ಅಯೋದ್ಯೇಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ ಎಂದರು. ಈ ಸಂದರ್ಭ ಬೆಕ್ಕರೆ ಗ್ರಾಮಸ್ಥರು ಇದ್ದರು.