ಗುಂಡ್ಲುಪೇಟೆ: ತಾಲೂಕಿನ ಹುಂಡೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕರುನಾಡ ಯುವಶಕ್ತಿ ಸಂಘಟನೆಯ ವತಿಯಿಂದ ಶಾಲಾ ಬ್ಯಾಗ್, ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ವಿವಿಧ ಪರಿಕರ ವಿತರಿಸಿ ಮಾತನಾಡಿದ ಕರುನಾಡ ಯುವಶಕ್ತಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಮುನೀರ್ ಪಾಷಾ, ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಉದ್ಧೇಶದಿಂದ ಶಾಲಾ ಬ್ಯಾಗ್, ಪುಸ್ತಕ ಸೇರಿದಂತೆ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ಕಲಿಕೆಯಲ್ಲಿ ಮುಂದೆ ಬಂದು ಉತ್ತಮ ಅಂಕ ಗಳಿಸಬೇಕೆಂದು ಸಲಹೆ ನೀಡಿದರು. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹೆಚ್ಚಿನ ಅಗತ್ಯವಿದೆ. ದಾನಿಗಳು ಹಾಗೂ ವಿವಿಧ ಸಂಘಟನೆಗಳು ಸಹಾಯ ಹಸ್ತ ಚಾಚುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಪೂರಕವಾಗುತ್ತದೆ. ಜೊತೆಗೆ ಉನ್ನತ ಹುದ್ದೆಗೇರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ ಮಾತನಾಡಿ, ಕರುನಾಡ ಯುವಶಕ್ತಿ ಸಂಘಟನೆಯು ಶಾಲಾ ಮಕ್ಕಳಿಗೆ ವಿವಿಧ ಪರಿಕರ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಈಶ್ವರ್, ತಾಲೂಕು ಯುವ ಘಟಕದ ಅಧ್ಯಕ್ಷ ಇಲಿಯಾಸ್, ಕುಮಾರ್, ಇಕ್ಬಾಲ್, ಟೌನ್ ಅಧ್ಯಕ್ಷ ಮಿಠಾಯಿ ಮಂಜುನಾಥ್, ರಾಜು, ಸಿದ್ದರಾಜು, ಶಾಲಾ ಮುಖ್ಯ ಶಿಕ್ಷಕಿ ಸುಮ ಭಜರಂಗಿ, ಸಹ ಶಿಕ್ಷಕರಾದ ನಾಗಪ್ಪ, ನಾಗರತ್ನಮ್ಮ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.