ಚಾಮರಾಜನಗರ: ದೇಶದ ಅಸಂಘಟಿತ ವಲಯದ ಕಾರ್ಮಿಕರ ಜೀವನ ಭದ್ರತೆಗಾಗಿ ರೂಪಿಸಲಾಗಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಮಾಸಿಕ ಪಿಂಚಣಿ ಯೋಜನೆಗೆ ನಗರದಲ್ಲಿಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಚಾಲನೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಕುರಿತು ಜಿಲ್ಲೆಯಾದ್ಯಂತ ಆರು ದಿನಗಳ ಕಾಲ ಅರಿವು ಮೂಡಿಸಲಿರುವ ಪ್ರಚಾರ ವಾಹನಕ್ಕೆ ಜಿಲ್ಲಾ ನ್ಯಾಯಾಧೀಶರು ಹಸಿರು ನಿಶಾನೆ ತೋರಿದರು.
ಯೋಜನೆಯ ಕುರಿತು ಮಾತನಾಡಿದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಾಕಷ್ಟು ಜನರಿಗೆ ಜೀವನ ಸಂಧ್ಯಾಕಾಲದಲ್ಲಿ ತಮ್ಮನ್ನು ಪೋಷಿಸಿಕೊಳ್ಳಲು ಅರ್ಥಿಕ ಮೂಲಗಳಿರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಸರ್ಕಾರವು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಹಿಂದೆ ಸಾಮಾಜಿಕವಾಗಿ ಜೀವನ ಭದ್ರತೆ ಇಲ್ಲದೇ ಅರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡ ಸರ್ಕಾರವು ವಯೋವೃದ್ಧರಾದ ಸಮಯದಲ್ಲಿ ಅಸಂಘಟಿತ ಕಾರ್ಮಿಕರನ್ನು ಅರ್ಥಿಕವಾಗಿ ಸದೃಢರನ್ನಾಗಿಸಲು ಈ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯ ಪ್ರಮುಖ ಉದ್ದೇಶದ ಕುರಿತು ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ ಅವರು ಮನೆಗೆಲಸದವರು, ಬೀಡಿ ಕಟ್ಟುವವರು, ಚಿಂದಿ ಆಯುವವರು, ಬೀದಿಬದಿ ವ್ಯಾಪಾರಿಗಳು, ಅಗಸರು, ಬಿಸಿಯೂಟ ಸಿದ್ದಪಡಿಸುವವರು ಸೇರಿದಂತೆ ದೇಶಾದ್ಯಂತ ೩೭೯ ಬಗೆಯ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಲಾಗಿದೆ. ವಯಸ್ಸಾದ ಕಾಲದಲ್ಲಿ ಅವರ ಜೀವನ ರಕ್ಷಣೆಗಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಮಾಸಿಕ ಪಿಂಚಣಿ ಯೋಜನೆ ನರವಾಗಲಿದೆ ಎಂದರು.
೧೮ರಿಂದ ೪೦ ವರ್ಷದೊಳಗಿನ ಹಾಗೂ ಮಾಸಿಕ ೧೫ ಸಾವಿರ ಆದಾಯ ಅಥವಾ ಅದಕ್ಕಿಂತ ಕಡಿಮೆ ಆದಾಯ ಇರುವ ಅಸಂಘಟಿತ ಕಾರ್ಮಿಕರು ಮಾತ್ರ ಯೋಜನೆಗೆ ಒಳಪಡಬಹುದಾಗಿದೆ. ಆದಾಯ ತೆರಿಗೆ ಕಟ್ಟುವವರು, ಇ.ಎಸ್.ಐ, ಪಿ.ಎಫ್ ಹಾಗೂ ಎನ್.ಪಿ.ಎಸ್. ಯೊಜನೆಯ ವ್ಯಾಪ್ತಿಗೆ ಬರುವವರು ಯೋಜನೆಗೆ ಅರ್ಹರಾಗುವುದಿಲ್ಲ. ಬ್ಯಾಂಕ್ ಉಳಿತಾಯ ಖಾತೆ ಹಾಗೂ ಅಧಾರ್ ಕಾರ್ಡ್ ಹೊಂದಿರಬೇಕು. ಚಂದದಾರರು ಪಾವತಿಸುವ ಮಾಸಿಕ ವಂತಿಗೆಗೆ ಸಮಾನಾಂತರ ವಂತಿಕೆಯನ್ನು ಸರ್ಕಾರವು ಪಿಂಚಣಿ ಖಾತೆಗೆ ಪಾವತಿಸಲಿದೆ. ಅಸಂಘಟಿತ ಕಾರ್ಮಿಕರಿಗೆ ೬೦ ವರ್ಷ ಪೂರ್ಣಗೊಂಡ ಬಳಿಕ ಪ್ರತಿ ಮಾಹೆ ೩ ಸಾವಿರ ರೂ. ಗಳಂತೆ ಪಿಂಚಣಿಯನ್ನು ನೀಡಲಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ನಂಜಪ್ಪ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಜಂಟಿ ಕಾರ್ಯದರ್ಶಿ ಮಲ್ಲು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಮಹೇಶ್, ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲೇಶ್, ಎಂ.ಟಿ.ಒ ಅನ್ಸರ್ ಖಾನ್, ಕಟ್ಟಡ ಕಾರ್ಮಿಕ ಮಂಡಳಿಯ ರಾಜೇಶ್, ಎಸ್.ಎ.ಪಿಯು ಘಟಕದ ಪ್ರಸನ್ನಮೂರ್ತಿ, ಅಸಂಘಟಿತ ಕಾರ್ಮಿಕ ಮಂಡಳಿಯ ಜಿಲ್ಲಾ ಸಂಯೋಜಕರಾದ ಶ್ರೀಧರ್, ವಕೀಲರಾದ ಉಮ್ಮತ್ತೂರು ಇಂದುಶೇಖರ್, ಸಿ.ಎನ್. ರವಿಕುಮಾರ್, ಸೌಮ್ಯವತಿ, ಮಹಾಲಿಂಗಸ್ವಾಮಿ, ಶ್ವೇತಾ, ಇತರರು ಇದೇ ವೇಳೆ ಇದ್ದರು.