ರಾಮನಗರ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಅಗತ್ಯ ಕೌನ್ಸೆಲಿಂಗ್ ನೀಡುವಂತೆ ಜಿಲ್ಲಾಧಿಕಾರಿ ಯಂಶವತ್ ವಿ. ಗುರುಕರ್ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.
ಅವರು ಆ. ೨೮ರ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಕೋಶ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹಗಳು ಗ್ರಾಮಗಳಲ್ಲಿ ಗುಪ್ತವಾಗಿ ನಡೆಯುವುದರಿಂದ ಕೆಲವೊಮ್ಮೆ ಅಧಿಕಾರಿಗಳಿಗೆ ಅದು ತಿಳಿಯುವುದು ತಡವಾಗುತ್ತದೆ, ಆ ರೀತಿಯ ಸಂದರ್ಭಗಳು ಎದುರಾಗುವ ಮೊದಲೇ ಶಾಲೆಗಳಲ್ಲಿ ಹೆಚ್ಚು ದಿನ ಗೈರು ಹಾಜರಾದ ಬಾಲಕಿಯರ ಬಗ್ಗೆ ಶಾಲೆಯ ಮುಖ್ಯೋಪಾದ್ಯಾಯರು ಗಮನ ಹರಿಸುತ್ತಿರಬೇಕು. ಒಂದು ವೇಳೆ ಗೈರು ಹಾಜರಾದ ಬಾಲಕಿಯರಿಗೆ ಪೋಷಕರು ವಿವಾಹ ಮಾಡುತ್ತಿರುವ ವಿಷಯ ತಿಳಿದುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಅಧಿಕಾರಿಗಳು ದೂರು ದಾಖಲಿಸಿಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು, ಯಾವುದೇ ಒತ್ತಡಗಳಿಗೆ ಮಣಿಯಬಾರದೆಂದು ಎಚ್ಚರಿಕೆ ನೀಡಿದರು.
ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸರ್ಕಾರ ನೀಡುವ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಇತರೆ ಸಂಘ ಸಂಸ್ಥೆಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮುಖಾಂತರ ಯೋಜನೆಗಳನ್ನು ಧಮನಿತ ಮಹಿಳೆಯರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಇಂತಹ ಮಹಿಳೆಯರಿಗೆ ಸ್ವಾಭಿಮಾನದಿಂದ ಜೀವನ ರೂಪಿಸಿಕೊಳ್ಳಲು ಸರ್ಕಾರದ ಸೌಲಭ್ಯಗಳನ್ನು ಹೊರತುಪಡಿಸಿ ವಿವಿಧ ಕರಕುಶಲ ಉದ್ಯಮಗಳು, ಸಣ್ಣ ಉದ್ದಿಮೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಬೇಕು ಅದಕ್ಕೆ ಬೇಕಾದ ಸೂಕ್ತ ತರಬೇತಿಯನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಬೇಕು. ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಕ್ಯಾಂಡಲ್, ಗಂಧದಕಡ್ಡಿ, ಹಪ್ಪಳ, ಸಂಡಿಗೆ ಮಾಡುವ ಸಣ್ಣ ಘಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾದೇಶಿಕವಾಗಿ ಹೆಚ್ಚು ಮನ್ನಣೆಗಳಿಸಬಹುದಾದ ಉದ್ದಿಮೆಗಳಲ್ಲಿ ಆದಷ್ಟು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ರಾಮನಗರ ಜಿಲ್ಲೆಯಲ್ಲಿ ೧೮೧ ಮಹಿಳಾ ಸಹಾಯವಾಣಿಯ ಮೂಲಕ ಏಪ್ರಿಲ್-೨೦೨೪ ರಿಂದ ಜುಲೈ-೨೦೨೪ರ ಅಂತ್ಯಕ್ಕೆ ೦೮ ಕರೆಗಳು ಸ್ವೀಕೃತವಾಗಿದ್ದು, ಈ ಪ್ರಕರಣಗಳಿಗೆ ಪೋಲಿಸ್ ನೆರೆವು, ಕಾನೂನು ನೆರವು, ಆಪ್ತ ಸಮಲೋಚನೆ ಸೇವೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಧನಶ್ರೀ ಯೋಜನೆಯಡಿ ಎಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ನೀಡಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಆರ್ಥಿಕ ಚಟುವಟಿಕೆ ನಡೆಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರೋತ್ಸಾಹ ಧನ ಸೌಲಭ್ಯ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಚನ್ನಪಟ್ಟಣ ಗೊಂಬೆಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದ್ದು, ಗೊಂಬೆಗಳು ತಯಾರಿಸುವ ಕರಕುಶಲ ತರಬೇತಿಯನ್ನು ನೀಡಿ ಅವರು ತಯಾರಿಸಿದ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾರಾಟ ಮಾಡುವ ಮುಖಾಂತರ ಅವರ ಜೀವನ ಸುಧಾರಿಸುವ ಉದ್ಯಮವನ್ನಾಗಿ ಮಾರ್ಪಾಡು ಮಾಡಬಹುದು ಎಂದು ತಿಳಿಸಿದರು.
ಅಂಗನವಾಡಿಗಳಿಗೆ ಅಗತ್ಯವಿರುವ ತರಕಾರಿಗಳನ್ನು ಸ್ಥಳ ಲಭ್ಯವಿದ್ದಲ್ಲಿ ಆವರಣದಲ್ಲಿಯೇ ಬೆಳೆದುಕೊಳ್ಳುವ ಸಲಹೆ ನೀಡಿದ ಅವರು, ಅಂಗನವಾಡಿಗಳಿಗೆ ಶಿಶು ಅಭಿವೃದ್ಧಿ ಅಧಿಕಾರಿಗಳು ಆಗಾಗ್ಯೆ ಭೇಟಿ ನೀಡಿ ಮಕ್ಕಳಿಗೆ ಕೊಡುವ ಆಹಾರ ಮತ್ತು ಆರೋಗ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತಾ ಪಿ.ಆರ್. ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಡಿವೈಎಸ್‌ಪಿ ದಿನಕರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕ ಗಾಯಿತ್ರಿ ದೇವಿ ಬಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲೆಯ ೫ ತಾಲ್ಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.