ಚಾಮರಾಜನಗರ: ಡಿಜಿಟಲ್ ಸಾಕ್ಷರತೆ ಹಾಗೂ ತಾಂತ್ರಿಕ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ದಿ ಪಡಿಸುವ ಸಲುವಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಕಾಳಜಿಯಿಂದ ಇನ್ಫೋಸಿಸ್ ಮತ್ತು ಮೈಸೂರಿನ ರೋಟರಿ ಪಂಚಶೀಲ್ ಸಂಸ್ಥೆಗಳೊಂದಿಗೆ ಈಗಾಗಲೇ ಆರಂಭಿಸಲಾಗಿರುವ ಸ್ಪ್ರಿಂಗ್‌ಬೋರ್ಡ್ ವಿನೂತನ ಕಾರ್ಯಕ್ರಮದ ಭಾಗವಾದ ಮೇಕರ್ ಲ್ಯಾಬ್ ಆನ್ ವೀಲ್ಸ್‌ಗೆ ಇಂದು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಶಾಲೆಗಳ ಸಮಗ್ರ ಅಭಿವೃದ್ದಿಗಾಗಿ ಮೂಲ ಸೌಲಭ್ಯಗಳೊಂದಿಗೆ ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಕಲಿಕಾ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿರುವ ಸ್ಪ್ರಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ. ಇದರ ಭಾಗವಾಗಿ ವಿಜ್ಞಾನ ಥಿಯರಿ ಹಾಗೂ ಪ್ರಯೋಗಾಲಯ ಸೇರಿದಂತೆ ಕಲಿಕಾಂಶಗಳ ಸಾಧನಗಳನ್ನು ಒಳಗೊಂಡ ಸುಸಜ್ಜಿತ ಸಂಚಾರಿ ಪ್ರಯೋಗಾಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಜಿಲ್ಲಾಡಳಿತ ಭವನದ ಮುಂಭಾಗ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸಂಚಾರಿ ಪ್ರಯೋಗಾಲಯಕ್ಕೆ ವಿಶೇಷವಾಗಿ ಬಸ್ಸನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ೨೦ ಟ್ಯಾಬ್‌ಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್, ತ್ರೀಡಿ ಪ್ರಿಂಟರ್ ಸೇರಿದಂತೆ ಬೋಧನೆ ಹಾಗೂ ಪ್ರಾಯೋಗಿಕಕ್ಕೆ ಅವಶ್ಯವಿರುವ ಇತರೆ ಎಲ್ಲಾ ಅತ್ಯಾಧುನಿಕ ಸಲಕರಣೆಗಳನ್ನು ಇರಿಸಲಾಗಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡಲು ಪೂರಕವಾಗಿರುವ ವ್ಯವಸ್ಥೆಯನ್ನೂ ಸಹ ಸಂಚಾರಿ ಪ್ರಯೋಗಾಲಯದಲ್ಲಿ ಮಾಡಲಾಗಿದೆ. ಯಾವುದೇ ಪಠ್ಯಕ್ರಮದ ವಿಷಯ ಎಷ್ಟೇ ಕ್ಲಿಷ್ಟಕರವಾಗಿದ್ದರೂ ವಿದ್ಯಾರ್ಥಿಗಳು ಕನ್ನಡದಲ್ಲಿಯೂ ಸಹ ಸರಳವಾಗಿ ಅಭ್ಯಾಸ ಮಾಡಲು ಅನುಕೂಲವಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಕೋರ್ಸ್‌ಗಳನ್ನು ಅಧ್ಯಯನ ಮಾಡಿ ಪ್ರಮಾಣ ಪತ್ರಗಳನ್ನೂ ಸಹ ಪಡೆಯಬಹುದಾಗಿದೆ. ಜಿಲ್ಲೆಯ ಒಟ್ಟು ೫೦ ಸರ್ಕಾರಿ ಪ್ರೌಢ ಶಾಲೆಗಳನ್ನು ಮೊದಲ ಹಂತದಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ನಗರದ ಆದರ್ಶ ವಿದ್ಯಾಲಯ, ನಂಜದೇವನಪುರ, ಅಮಚವಾಡಿ ಮತ್ತು ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಸಂಚಾರಿ ಪ್ರಯೋಗಾಲಯ ಭೇಟಿ ನೀಡುತ್ತಿದೆ.
ಇನ್‌ಫೋಸಿಸ್ ತಂದಿರುವ ಈ ಮೊಬೈಲ್ ಸ್ಟೆಮ್ ಲ್ಯಾಬ್ ಆನ್ ವೀಲ್ ಅಂದರೆ ಸೈನ್ಸ್ ಟೆಕ್ನಾಲಜಿ ಎಂಜಿನಿಯರಿಂಗ್ ಮತ್ತು ಮ್ಯಾಥಮೆಟಿಕ್ಸ್ ಅಧ್ಯಯನ ಹಾಗೂ ಪ್ರಯೋಗಕ್ಕೆ ಅವಕಾಶಗಳು ಇವೆ. ಮಕ್ಕಳು ಪುಸ್ತಕಕ್ಕಿಂತ ಪ್ರಯೋಗಗಳ ಮೂಲಕ ಪರಿಣಾಮಕಾರಿಯಾಗಿ ಕಲಿಯಬಹುದಾಗಿದೆ. ಈಗಾಗಲೇ ೨೦ ಲಕ್ಷ ರೂ. ವೆಚ್ಚದ ಟ್ಯಾಬ್‌ಗಳನ್ನು ೫೦ ಸರ್ಕಾರಿ ಶಾಲೆಗಳಿಗೆ ನೀಡಲಾಗಿದ್ದು, ೧೦೦ ಸರ್ಕಾರಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕ ಸಮೂಹ ಇನ್‌ಫೋಸಿಸ್ ಗೆ ಧನ್ಯವಾದಗಳನ್ನು ತಿಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.
ಇನ್‌ಫೋಸಿಸ್ ಸಂಸ್ಥೆಯ ಬಿಳಿಗಿರಿ ರಂಗ, ವಿನಯ್ ವಸಂತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೆಗೌಡ, ತಾಂತ್ರಿಕ ಸಹಾಯಕರಾದ ಸಿದ್ದರಾಜು, ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.