Saturday, April 19, 2025
Google search engine

Homeರಾಜ್ಯಸುದ್ದಿಜಾಲಮಹಿಳೆಯರ ಸಂರಕ್ಷಣೆ, ಬಾಲ್ಯವಿವಾಹ ನಿಷೇಧ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಮಹಿಳೆಯರ ಸಂರಕ್ಷಣೆ, ಬಾಲ್ಯವಿವಾಹ ನಿಷೇಧ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ರಾಜನಗರ: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ, ಬಾಲ್ಯ ವಿವಾಹ ನಿಷೇಧ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆಶ್ರಯ ನೆರವು ನೀಡುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ, ಬಾಲ್ಯ ವಿವಾಹ ನಿಷೇಧ, ಸಖಿ ಒನ್ ಸ್ಟಾಪ್ ಸೆಂಟರ್ ನಿರ್ವಹಣೆ, ಮಹಿಳೆಯರು ಮತ್ತು ಮಕ್ಕಳ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕುರಿತ ವಿವಿಧ ಕಾರ್ಯಕ್ರಮಗಳ ಬಗೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯನ್ವಯ ಮಹಿಳೆಯರಿಗೆ ರಕ್ಷಣೆ ನೀಡುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ನೊಂದ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ನೆರವಿಗೆ ಬರಬೇಕು. ಮಹಿಳೆಯರಿಗಾಗಿ ಇರುವ ಕಾರ್ಯಕ್ರಮಗಳು ಚಾಚು ತಪ್ಪದೇ ಅನುಷ್ಠಾನಕ್ಕೆ ತರಬೇಕು ಎಂದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಕರು, ಉಪನ್ಯಾಸಕರ ನೆರವು ಪಡೆದು ಯಾವುದೇ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಮಾತನಾಡಿ ಕೌಟುಂಬಿಕ ಹಿಂಸೆಯಿಂದ ತೊಂದರೆಗೊಳಗಾದ ಮಹಿಳೆಯರ ಪ್ರಕರಣಗಳಲ್ಲಿ ಕೌಟುಂಬಿಕ ಘಟನಾ (ಡಿ.ಐ.ಆರ್) ವರದಿಯನ್ನು ಸಲ್ಲಿಸಬೇಕು. ಮಹಿಳೆಯರ ಸಂರಕ್ಷಣೆ ವಿಷಯದಲ್ಲಿ ನೀಡಲಾಗುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪ್ರಥಮ ವರ್ತಮಾನ ವರದಿ, ಕಾನೂನಾತ್ಮಕ ಪ್ರಕ್ರಿಯೆಗಳನ್ನು ವಿಳಂಬಕ್ಕೆ ಅವಕಾಶವಿಲ್ಲದೆ ತಕ್ಷಣವೇ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ವಿತರಣೆ ಮಾರ್ಗಸೂಚಿ ಅನುಸಾರ ಆಗಬೇಕು. ಸರಬರಾಜಾಗುವ ಆಹಾರದ ಗುಣಮಟ್ಟ ಪರೀಕ್ಷಿಸಬೇಕು. ಅಂಗನವಾಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ದೂರುಗಳು, ಯಾವುದೇ ಲೋಪಗಳು ಕಂಡು ಬಂದರೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ವಿತರಣೆಗೆ ವಿಶೇಷ ಗಮನ ನೀಡಿ. ಆರೋಗ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಕಾರದೊಂದಿಗೆ ಮಕ್ಕಳ ಆರೋಗ್ಯ ವೃದ್ದಿಗೆ ಇರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿ. ಪ್ರತೀ ತಾಲೂಕಿನಲ್ಲಿ ಕನಿಷ್ಠ ೫೦ ಅಂಗನವಾಡಿಗಳಲ್ಲಿ ಪೌಷ್ಠಿಕ ಕೈತೋಟಗಳನ್ನು ಅಭಿವೃದ್ದಿಪಡಿಸುವ ಗುರಿ ಹಾಕಿಕೊಳ್ಳಿ. ತೋಟಗಾರಿಕೆ ಇಲಾಖೆಯ ಸಲಹೆ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕುರಿತ ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಸುಧೀರ್ಘವಾಗಿ ಸಭೆಯಲ್ಲಿ ಪರಿಶೀಲಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಇಂದುಶೇಖರ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular