ಚಾಮರಾಜನಗರ: ರಸ್ತೆ ಸುರಕ್ಷತಾ ನಿಯಮಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಅಪಘಾತ ಪ್ರಕರಣಗಳನ್ನು ತಡೆಗಟ್ಟಬೇಕು. ರಸ್ತೆ ಸುರಕ್ಷತೆ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲನೆಗೆ ಸೂಕ್ತವಾಗುವಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಹೆದ್ದಾರಿ, ರಸ್ತೆ ನಿರ್ಮಾಣ ಮಾಡುವ ಇಲಾಖೆಗಳು ತೆಗೆದುಕೊಳ್ಳಬೇಕಿದೆ. ಕೂಡು ರಸ್ತೆಗಳು, ಜಂಕ್ಷನ್ ಜನನಿಬಿಡ ಸ್ಥಳಗಳು, ಗ್ರಾಮಗಳು, ಇನ್ನಿತರ ಕಡೆ ಸುಗಮವಾಗಿ ವಾಹನ ಚಾಲನೆ ಮಾಡಲು ಅವಶ್ಯವಿರುವ ಎಲ್ಲ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೈಮಾಸ್ಟ್ ದೀಪ ಅಳವಡಿಕೆ, ಸಂದೇಶ ನೀಡುವ ಫಲಕಗಳನ್ನು ಹಾಕಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ರಸ್ತೆ ಸುರಕ್ಷತೆಗೆ ಪೊಲೀಸ್ ಇಲಾಖೆ, ಇನ್ನಿತರ ಇಲಾಖೆಗಳ ನೆರವು ಮಾರ್ಗದರ್ಶನ ಪಡೆದು ವಾಹನಗಳ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡಬೇಕು. ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಬೇಕು. ಸಂಚಾರ ನಿಯಮಗಳ ಅನುಸಾರ ರಸ್ತೆ, ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಚಾಲಕರಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕು ಎಂದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ವಾಹನಗಳ ನಿಲುಗಡೆಗೆ ನಿಗದಿತ ಸ್ಥಳಗಳಲ್ಲಿ ಅವಕಾಶ ಮಾಡಿಕೊಡಬೇಕಿದೆ. ಸುಗಮ ಸಂಚಾರಕ್ಕೆ ವಹಿಸಬೇಕಿರುವ ಕಾರ್ಯಗಳಿಗೆ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯ ಅಧಿಕಾರಿಗಳು, ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಮುಂದಾಗಬೇಕು. ಸಾಕು ಪ್ರಾಣಿಗಳಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ವೇಗಮಿತಿ ಅನುಸರಿಸಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ವಾಹನಗಳು ಮಿತಿ ಮೀರಿದ ಸರಕು ಸಾಗಾಣೆ ಮಾಡುವುದು ತಪ್ಪಿಸಬೇಕು. ಪ್ರಯಾಣಿಕರು, ಶಾಲಾ ವಾಹನಗಳಲ್ಲಿ ನಿಗದಿತ ಸಾಮರ್ಥ್ಯಕಿಂತ ಹೆಚ್ಚು ಸಂಖ್ಯೆಯಲ್ಲಿ ಕರೆದೊಯ್ಯುವುದಕ್ಕೆ ಕಡಿವಾಣ ಹಾಕಬೇಕು. ಸುರಕ್ಷತೆಯ ಉದ್ದೇಶದಿಂದ ತಪಾಸಣಾ ಕಾರ್ಯವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಶಾಲಾ ಆಡಳಿತ ಮಂಡಳಿಗಳಿಗೆ ವಿದ್ಯಾರ್ಥಿಗಳ ಸುರಕ್ಷತೆ ಅನುಸರಿಸಲು ನೋಟಿಸ್ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿಶೇಷ ಆಂದೋಲನವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು. ನಗರ, ಪಟ್ಟಣ ಹಾಗೂ ತಾಲೂಕುಗಳಲ್ಲಿಯೂ ಎಲ್ಲರ ಸಹಕಾರ ಪಡೆದು ಅರಿವು ಮೂಡಿಸುವ ಕಾರ್ಯಕ್ಕೆ ಅಧಿಕಾರಿಗಳು ರೂಪುರೇಷೆ ತಯಾರಿಸಿ ಅನುಷ್ಠಾನಗೊಳಿಸಬೇಕು. ರಸ್ತೆ ಸುರಕ್ಷತೆ ಕುರಿತು ಶಾಲಾ ಕಾಲೇಜು ಹಂತದಲ್ಲಿ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಏರ್ಪಾಡು ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಹೆದ್ದಾರಿ, ರಸ್ತೆಗಳಲ್ಲಿ ಸುಗಮವಾಗಿ ವಾಹನ ಚಾಲನೆಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ರಸ್ತೆ, ಹೆದ್ದಾರಿ ನಿರ್ಮಾಣ ಮಾಡುವ ಪ್ರಾಧಿಕಾರ, ಇಲಾಖೆಗಳು ಕಲ್ಪಿಸಬೇಕು. ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು. ರಸ್ತೆ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮಾರ್ಗದರ್ಶನಗಳನ್ನು ಮಾಡಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೆಶಕರಾದ ರಾಹುಲ್ ಗುಪ್ತಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಕೆಶಿಪ್ ನ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಅಬಕಾರಿ ಆಯುಕ್ತರಾದ ಆರ್. ನಾಗಶಯನ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್‌ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇಅರಸ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.