ಚಾಮರಾಜನಗರ : ನನ್ನ ಮಣ್ಣು ನನ್ನ ದೇಶ ಕುರಿತ ಅಮೃತ ಕಳಶ ಯಾತ್ರೆಯ ಅಂಗವಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಜಿಲ್ಲೆಯ ಐದು ತಾಲೂಕುಗಳ ಪ್ರತಿನಿಧಿಗಳಿಗೆ ಅಮೃತ ಕಳಶ ನೀಡುವ ಮೂಲಕ ಶುಭ ಕೋರಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಮೃತ ಕಳಸಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸರ್ವರಿಗೂ ಪಂಚ ಪ್ರಾಣ್ ಬೋಧಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕಿರಣ್ ಪಡ್ನೇಕರ್ ಮಾತನಾಡಿ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆಯ ಕಾರ್ಯಕ್ರಮವು ದೇಶದ ಸ್ವಾತಂತ್ರ, ಸಮಾನತೆ, ವಿವಿಧತೆಯಲ್ಲಿ ಏಕತೆ ಸಾರುವ ಭಾರತ ಸರ್ಕಾರದ ವಿಶಿಷ್ಟ, ವಿನೂತನ ಹಾಗೂ ವಿಭಿನ್ನ ಕಾರ್ಯಕ್ರಮವಾಗಿದೆ. ಯಾತ್ರೆಗಾಗಿ ಜಿಲ್ಲೆಯ ೫ ತಾಲೂಕುಗಳಲ್ಲಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಮಣ್ಣನ್ನು ಸಂಗ್ರಹಣೆ ಮಾಡಲಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಮಣ್ಣನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿದೆ. ಹೀಗೆ ಸಂಗ್ರಹಿಸಿದ ಮಣ್ಣನ್ನು ಅಮೃತ ಕಳಸ ಯಾತ್ರೆ ಮೂಲಕ ದೆಹಲಿಗೆ ತಲುಪಿಸಲಾಗುವುದು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಅಮೃತ ಕಳಶ ಯಾತ್ರೆಯ ಮೂಲಕ ದೇಶದ ಎಲ್ಲಾ ಭಾಗದ ಮಣ್ಣುಗಳನ್ನು ಸಂಗ್ರಹಿಸಿ ದೇಹಲಿಯ ಇಂಡಿಯಾ ಗೇಟ್‌ನಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಅಲ್ಲಿಗೆ ಜಿಲ್ಲೆಯ ೫ ತಾಲೂಕುಗಳ ಪ್ರತಿನಿಧಿಗಳು ಯಾತ್ರೆ ಸಾಗಿ ಮಣ್ಣನ್ನು ಸಮರ್ಪಿಸಲಿದ್ದಾರೆ ಎಂದು ಅವರು ತಿಳಿಸಿದರು.
ಬಳಿಕ ಅಮೃತ ಕಳಶ ಯಾತ್ರೆಯು ಜಿಲ್ಲಾಪಂಚಾಯಿತಿ ಸಭಾಂಗಣದಿಂದ ಸಾಗಿ ಜಿಲ್ಲಾಡಳಿತ ಭವನದ ಆವರಣದ ಮುಖ್ಯ ದ್ವಾರದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ನೆಹರು ಯುವ ಕೇಂದ್ರದ ಅಧಿಕಾರಿಗಳು, ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು, ಎನ್.ಆರ್.ಎಲ್.ಎಂ, ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಕೃಷಿ ಸಖಿ, ಪಶು ಸಖಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದರು.