Saturday, April 19, 2025
Google search engine

Homeಸ್ಥಳೀಯಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ

ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ

ಚಾಮರಾಜನಗರ: ಪ್ರತಿ ಮನೆಗೆ 200 ಯೂನಿಟ್‍ವರೆಗೆ ಉಚಿತವಾಗಿ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ನಗರದಲ್ಲಿ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಇಂಧನ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗೃಹಜ್ಯೋತಿ ಯೋಜನೆ ಉದ್ಘಾಟಿಸಿ ಫಲಾನುಭವಿಗಳಿಗೆ ಶೂನ್ಯ ದರದ ಬಿಲ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಒದಗಿಸುವ ಯೋಜನೆಗೆ ಇಂದು ಚಾಲನೆ ನೀಡಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಶೇ. 82ರಷ್ಟು ಜನರು ನೋಂದಾಯಿಸಿಕೊಂಡಿದ್ದಾರೆ. ಬಾಕಿ ಇರುವ ಗ್ರಾಹಕರು ಶೀಘ್ರ ನೋಂದಾಯಿಸಿಕೊಂಡಲ್ಲಿ ಉಚಿತವಾಗಿ ಸೌಲಭ್ಯದ ಪ್ರಯೋಜನ ಪಡೆಯಹುದಾಗಿದೆ ಎಂದರು.

ಗೃಹಜ್ಯೋತಿ ಯೋಜನೆಗೆ ವರ್ಷದ ಸರಾಸರಿ ಬಳಕೆಯ ಯೂನಿಟ್‍ಗಳನ್ನು ಪರಿಗಣಿಸಲಾಗುತ್ತದೆ. ಇದರ ಮೇಲೆ ಶೇ. 10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಅದಕ್ಕನುಗುಣವಾಗಿ ಉಚಿತವಾಗಿ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯುತ್ ದುರುಪಯೋಗ ತಡೆಯಲು ಸರಾಸರಿ ಬಳಕೆಯನ್ನ ಅನುಸರಿಸಲಾಗುತ್ತಿದೆ. ಯೋಜನೆಗೆ ನೋಂದಾಯಿಸಿಕೊಂಡ ಅರ್ಹರೆಲ್ಲರಿಗೂ ಜುಲೈ ತಿಂಗಳ ಬಳಕೆಯ ಶೂನ್ಯ ಬಿಲ್ ಬರಲಿದೆ. ಮುಂದೆಯೂ ನೋಂದಾಯಿಸಿಕೊಂಡಲ್ಲಿ ಯೋಜನೆ ಲಭ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಮತ್ತೊಂದು ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿಗೆ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೆ ಶೆ. 86ರಷ್ಟು ನೋಂದಣಿಯಾಗಿದ್ದು, ಇನ್ನೂ ಶೇ 14ರಷ್ಟು ಫಲಾನುಭವಿಗಳು ಮಾತ್ರ ನೋಂದಾಯಿಸಲು ಬಾಕಿ ಇದೆ. ಇದೇ ಆಗಸ್ಟ್ 15ರಂದು ಯೋಜನೆಯ ಸೌಲಭ್ಯ ಜಾರಿಯಾಗಲಿದ್ದು, ಬಾಕಿ ಇರುವ ಫಲಾನುಭವಿಗಳು ನೋಂದಾಯಿಸಿಕೊಳ್ಳಬೇಕು ಎಂದರು.

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನಗದು ವರ್ಗಾವಣೆ ಮಾಡಲಾಗಿದೆ. ಶಕ್ತಿ ಯೋಜನೆಯನ್ನು ಹೆಚ್ಚು ಸಂಖ್ಯೆಯ ಮಹಿಳೆಯರು ಸದುಪಯೋಗಪಡಿಸಿಕೊಂಡಿದ್ದಾರೆ. ಉದ್ಯೋಗಕ್ಕೆ ತೆರಳುವ ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಅನುಷ್ಠಾನವಾಗಿರುವ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ರಾಜ್ಯ ಸರ್ಕಾರ ಘೋಷಿಸಿದ ಮತ್ತೊಂದು ಯೋಜನೆಯಾದ ಯುವನಿಧಿಯನ್ನೂ ಸಹ ಜಾರಿಗೆ ತರಲಿದ್ದೇವೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಸರ್ಕಾರ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜನರ ಹಿತ ಕಾಪಾಡಿ ಅವರ ನೆರವಿಗಾಗಿ ದೇಶದಲ್ಲೇ ಯಾವ ರಾಜ್ಯವೂ ಮಾಡಿರದಂತಹ ಉಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನುಡಿದಂತೆ ನಡೆದ ಸರ್ಕಾರ ನಮ್ಮದು. ಜಿಲ್ಲೆಯ ಅಭಿವೃದ್ದಿಗೆ ಸಿದ್ದರಾಮಯ್ಯನವರ ಕೊಡುಗೆ ಸಾಕಷ್ಟಿದೆ. ಕುಡಿಯುವ ನೀರಿನ ಯೋಜನೆ ಸೇರಿದಂತೆ ನಗರದ ಅನೇಕ ಅಭಿವೃದ್ದಿ ಕಾರ್ಯಗಳ ಜಾರಿಗೆ ಮನವಿ ಮಾಡಿದ್ದು, ಎಲ್ಲವೂ ಚಾಲನೆಗೊಳ್ಳಲಿದೆ ಎಂದರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ರಾಜ್ಯ ಸರ್ಕಾರದ ಜಾರಿಗೆ ತಂದ ಯೋಜನೆಗಳು ಎಲ್ಲಾ ವರ್ಗದವರಿಗೆ ತಲುಪುತ್ತಿದೆ. ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ಶಕ್ತಿ ಯೋಜನೆ ಮಹಿಳೆಯರಿಗೆ ಸದುಪಯೋಗವಾಗಿದೆ. ಪ್ರಾಮಾಣಿಕವಾಗಿ ಯೋಜನೆಗಳ ಅನುಷ್ಠಾನವಾಗುತ್ತಿದೆ. ಯುವನಿಧಿ ಯೋಜನೆಗೂ ಚಾಲನೆ ಸಿಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗಣ್ಯರು ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ಗಳನ್ನು ವಿತರಿಸಿದರು.

ಶಾಸಕರಾದ ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ಡಾ. ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಗಿರಿಜಾ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಲೋಕೇಶ್, ಕಾರ್ಯನಿರ್ವಾಹಕ ಎಂಜಿನಿಯರ್ ವಸಂತ್ ಕುಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular