ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟ ಉದ್ಘಾಟಿಸಿದ ಚಿತ್ರದುರ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುಚೇತಾ ಎಂ ನೆಲವಿಗಿ ಅವರು ಮಾತನಾಡಿ, ಈಗಾಗಲೇ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ, ನಂತರ ವಿಭಾಗದ ಮಟ್ಟದ ವಿಜೇತ ಕ್ರೀಡಾಪಟುಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗುವರು. ರಾಜ್ಯಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 22 ರಿಂದ 25 ರವರೆಗೆ ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 975 ಪುರುಷರು ಹಾಗೂ 234 ಮಹಿಳಾ ಕ್ರೀಡಾಪಟುಗಳು ಆನ್‍ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಚಳ್ಳಕೆರೆ ತಾಲ್ಲೂಕಿನ 354 ಕ್ರೀಡಾಪುಟಗಳು, ಚಿತ್ರದುರ್ಗ-714, ಹೊಸದುರ್ಗ-470, ಹಿರಿಯೂರು-171, ಹೊಳಲ್ಕೆರೆ-218, ಮೊಳಕಾಲ್ಮುರು-157 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದು, ಇನ್ನೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 2800ಕ್ಕೂ ಹೆಚ್ಚು ಕ್ರೀಡಾಪುಟಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ ಬ್ಯಾಸ್ಕೆಟ್‍ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಹುಮ್ಮಸ್ಸಿನಿಂದ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಹಂತೇಶ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳಾದ ಜಯಣ್ಣ, ಎ.ನೀಲಕಂಠಾಚಾರ್, ದೈಹಿಕ ಶಿಕ್ಷಣ ಶಿಕ್ಷಕಿ ಸಲ್ಮಾ, ಕ್ರೀಡಾ ತರಬೇತುದಾರರಾದ ಸಾಧಿಕ್, ಮುಹಿಬುಲ್ಲಾ ಸೇರಿದಂತೆ ಕ್ರೀಡಾಪಟುಗಳು ಇದ್ದರು.