Tuesday, April 22, 2025
Google search engine

Homeರಾಜ್ಯಸುದ್ದಿಜಾಲಸಖಿ-ಒನ್ ಸ್ಟಾಪ್ ಸೆಂಟರ್‍ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಸಖಿ-ಒನ್ ಸ್ಟಾಪ್ ಸೆಂಟರ್‍ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ: ಕಾಣೆಯಾದ ಪ್ರಕರಣಗಳಲ್ಲಿ ಹದಿಹರೆಯದ ವಯಸ್ಸಿನ ಮಕ್ಕಳೇ ಹೆಚ್ಚಾಗಿದ್ದು, ಈ ಹಂತದಲ್ಲಿ ಮಕ್ಕಳಿಗೆ ಅಗತ್ಯವಾದ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಸಖಿ-ಒನ್ ಸ್ಟಾಪ್ ಸೆಂಟರ್‍ಗಳ ಕೌನ್ಸಿಲರ್‍ಗಳು ಮತ್ತು ಶಾಲಾ ಶಿಕ್ಷಕರು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅಧಿಕಾರಿಗಳಿಗೆ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಖಿ-ಒನ್ ಸ್ಟಾಪ್ ಸೆಂಟರ್‍ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕವಾದ ಒಡನಾಟ ಹೊಂದುವುದು ಅತ್ಯವಶ್ಯಕ. ಶಾಲೆಗಳಲ್ಲಿ ಶಿಕ್ಷಕರು ಪ್ರಮುಖವಾಗಿ 8, 9 ಮತ್ತು 10ನೇ ತರಗತಿಯ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಭಾಗವಹಿಸುವಿಕೆಯನ್ನು ಗಮನಿಸಬೇಕು. ಯಾವುದೇ ರೀತಿಯ ಅನುಮಾನ ಬಂದಲ್ಲಿ ಅವರನ್ನು ಸಂದರ್ಶನಕ್ಕೆ ಒಳಪಡಿಸಿ ಸಮಸ್ಯೆಯನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಅತ್ಯಾಚಾರ, ಅಪಹರಣ, ಬಾಲ್ಯವಿವಾಹ, ಸೈಬರ್ ಅಪರಾಧ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹದಿಹರೆಯದವರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು. ಸಖಿ-ಒನ್ ಸ್ಟಾಪ್ ಸೆಂಟರ್‍ಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೈದ್ಯಕೀಯ, ಕಾನೂನು, ಮಾನಸಿಕ, ಸಾಮಾಜಿಕ ಬೆಂಬಲ ಮತ್ತು ತಾತ್ಕಾಲಿಕ ಆಶ್ರಯ ಸೇವೆಗಳನ್ನು ಒದಗಿಸಬೇಕು. ಕೌಟುಂಬಿಕ ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಮಹಿಳೆಯರು ಬಂದಾಗ ತಕ್ಷಣವೇ ಎಫ್.ಐ.ಆರ್ ದಾಖಲಿಸದೇ ಮೊದಲನೆಯದಾಗಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂತ್ರಸ್ಥೆ ಹಾಗೂ ಅವರ ಕುಟುಂಬದವರೊಂದಿಗೂ ಆಪ್ತ ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇದು ಸಾಮಾಜಿಕ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಇಲ್ಲಿಯವರೆಗೆ ಮಕ್ಕಳಿಗೆ ಸಂಬಂಧಿಸಿದಂತೆ 61 ಪ್ರಕರಣಗಳು ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ 46 ಪ್ರಕರಣ ಸೇರಿದಂತೆ ಒಟ್ಟು 107 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮಹಿಳಾ ಅಧಿಕಾರಿ ನೂರ್ ಅಹಮದ್, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಎನ್.ಬಿ, ಮಕ್ಕಳ ರಕ್ಷಣಾ ಘಟಕಾಧಿಕಾರಿ ರಾಜಕುಮಾರ್, ಶುಭೋದಯ ಸೇವಾ ಸಂಸ್ಥೆ ಕಾರ್ಯದರ್ಶಿ ಕುಮಾರ್ ಹೆಚ್.ಬಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular