ದಾವಣಗೆರೆ: ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯಡಿ ಜಿಲ್ಲೆಯಲ್ಲಿರುವ ಎಲ್ಲ ಸ್ಕ್ಯಾನಿಂಗ್ ಸೆಂಟರ್‍ಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಉಪವಿಭಾಗಾಧಿಕಾರಿ ದುರ್ಗಾಶ್ರೀ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಸಂಸ್ಥೆಗಳು ಸರ್ಕಾರದ ಇ-ಕಲ್ಯಾಣಿ ಸಾಪ್ಟ್‍ವೇರ್‍ನಲ್ಲಿ ನೋಂದಣಿ ಮಾಡದಿರುವ ಮತ್ತು ನಿಗದಿತ ನಿಯಮ ಪಾಲನೆ ಹಾಗೂ ದಾಖಲೆಗಳನ್ನು ನಿರ್ವಹಿಸದೇ ಇರುವ ಆರೋಗ್ಯ ಸಂಸ್ಥೆಗಳ ವಿರುದ್ಧ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು.
ನಿಟ್ಟುವಳಿ ಇ.ಎಸ್.ಐ ಹಾಸ್ಪಿಟಲ್, ನಗರದ ಎಸ್.ಎಸ್ ನಾರಾಯಣ ಹೃದಯಾಲಯ, ಹರಿಹರ ತಾಲ್ಲೂಕಿನ ಜನನಿ ನರ್ಸಿಂಗ್ ಹೋಂ ಮತ್ತು ಅಕ್ಷಯ ಹಾಸ್ಪಿಟಲ್‍ಗಳು ನೋಂದಣಿ ಅವಧಿ ಪೂರ್ಣಗೊಳಿಸಿದ್ದು, ನೋಂದಣಿ ನವೀಕರಣಕ್ಕಾಗಿ 30 ದಿನಗಳು ಮುಂಚಿತವಾಗಿ ಮನವಿ ಸಲ್ಲಿಸದೇ ಡಿ.ಡಿ. ಮೊತ್ತ ರೂ.17,500 ನವೀಕರಿಣಕ್ಕೆ ಸಲ್ಲಿಸಿದ್ದು, ಕೆ.ಪಿ.ಎಂ.ಇ ನೋಂದಣಿ ಮುಕ್ತಾಯಗೊಂಡಿರುವ ಪ್ರತಿಯನ್ನು ಅಂತರ್ಜಾಲದಲ್ಲಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ನೋಂದಣಿ ಮಾಡುವ ಸಂಸ್ಥೆಗಳು: ಚನ್ನಗಿರಿ ತಾಲ್ಲೂಕಿನಲ್ಲಿರುವ ಶ್ರೀ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಂಡ್ ಟ್ರಾಮಾ ಕೇರ್, ಜಗಳೂರು ತಾಲ್ಲೂಕಿನ ರಾಘವ ಡಯಾಗ್ನೋಸ್ಟಿಕ್ ಸೆಂಟರ್ ಅಂಡ್ ಪಾಲಿ ಕ್ಲಿನಿಕ್ ಮತ್ತು ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಜೈನ್ ಹಾಸ್ಪಿಟಲ್.
ಪಿ.ಸಿ. & ಪಿ.ಎನ್.ಡಿ.ಟಿ ಕಾಯ್ದೆಯನ್ನು ಡಯಾಗ್ನೊಸ್ಟಿಕ್ ಸೆಂಟರ್ ನೋಂದಣಿ, ನವೀಕರಣ ಇಂತಹುಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳದೇ, ಲಿಂಗ ಪತ್ತೆ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾಯ್ದೆಯನ್ನು ಅನುಷ್ಟಾನಗೊಳಿಸಲು ಪ್ರಯತ್ನಿಸಬೇಕು. ಆದ್ದರಿಂದ ಮುಂದಿನ ಸಭೆಯೊಳಗಾಗಿ ಒಂದೆರಡು ಲಿಂಗ ಪತ್ತೆ ಪರೀಕ್ಷೆ ಮಾಡುವವರ ಹಾಗೂ ಹೆಣ್ಣು ಭ್ರೂಣ ಗರ್ಭಪಾತ ಮಾಡಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಯಾಗಿಸಿದರೆ ಇತರರು ಎಚ್ಚೆತ್ತುಕೊಳ್ಳುತ್ತಾರೆ ಎಂದ ಅವರು ಇದೆಲ್ಲಕ್ಕಿಂತ ಹೆಚ್ಚಾಗಿ ಈ ಕೃತ್ಯದಲ್ಲಿ ಭಾಗಿಯಾಗುವ ತಜ್ಞರು, ಸಿಬ್ಬಂದಿ ಮತ್ತು ಅಂತಹ ಪೋಷಕರ ಮನಸ್ಥಿತಿ ಬದಲಾಗಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಡಾ. ರುದ್ರಸ್ವಾಮಿ, ರೇಡಿಯಾಲಜಿಸ್ಟ್ ಡಾ.ಸುಮಿತ್ರಾ. ಎಲ್, ಡಾ. ಭಾರತಿ, ಸಮಾಜ ಕಾರ್ಯಕರ್ತ ಶ್ರೀಕಾಂತ್ ಉಪಸ್ಥಿತರಿದ್ದರು.