Friday, March 27, 2026
Google search engine

Homeರಾಜಕೀಯಸದನದಲ್ಲಿ ವಿಪಕ್ಷದ ನಾಯಕರಿಗೆ ಪಾಸಿಟಿವ್‌ ಥಿಂಕಿಂಗ್‌ ಪಾಠ ಮಾಡಿದ ಡಿಕೆ ಶಿವಕುಮಾರ್

ಸದನದಲ್ಲಿ ವಿಪಕ್ಷದ ನಾಯಕರಿಗೆ ಪಾಸಿಟಿವ್‌ ಥಿಂಕಿಂಗ್‌ ಪಾಠ ಮಾಡಿದ ಡಿಕೆ ಶಿವಕುಮಾರ್

ಬೆಂಗಳೂರು : ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ತಮ್ಮ ಕವಿತ್ವದ ಪ್ರದರ್ಶನ ಮಾಡಿದ್ದು, ವಿಪಕ್ಷದ ನಾಯಕರಿಗೆ ಪಾಸಿಟಿವ್‌ ಥಿಂಕಿಂಗ್‌ ಪಾಠ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಬಗ್ಗೆ ನಡೆದ ಚರ್ಚೆಗೆ ಉತ್ತರಿಸುವ ವೇಳೆ ತಾವು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ್ದ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲೊಂದನ್ನು ಉಲ್ಲೇಖಿಸಿದರು. ‘ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಜಗವನ್ನು ಉದ್ದರಿಸುವೆ ಎನುತಿಹೆ ಸಖನೇ ನಿನ್ನ ಉದ್ದಾರ ಎಷ್ಟಾಯಿತೋ ಮಂಕುತಿಮ್ಮ’ ಎಂಬ ಮಾತು ಈಗ ಮತ್ತೆ ನೆನಪಿಗೆ ಬರುತ್ತಿದೆ ಎಂದು ವಿಪಕ್ಷದ ಸದಸ್ಯರ ಕಾಲೆಳೆದಿದ್ದಾರೆ.

ಈ ಸದನದಲ್ಲಿ ಈ ಹಿಂದೆ ಇದ್ದ ನಾಯಕರಾದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್‌, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಲಕ್ಕಪ್ಪ, ಮೇಲ್ಮನೆಯಲ್ಲಿ ನಾಣಯ್ಯ, ಎ.ಕೆ.ಸುಬ್ಬಯ್ಯ, ಎಂ.ಸಿ ನಾಣಯ್ಯ ಸೇರಿ ಅನೇಕರು ಚೆನ್ನಾಗಿ ಚರ್ಚೆ ಮಾಡುತ್ತಿದ್ದರು. ಆಗಿನ ಚರ್ಚೆ ಸಕಾರಾತ್ಮಕವಾಗಿ ನಡೆಯುತ್ತಿತ್ತು. ಈಗ ನಕರಾತ್ಮಕವಾಗಿ ಹೋಗುತ್ತಿದ್ದು, Positive thinkers always have a solution for every problem. Negative thinker always have problem for every solution. ಧನಾತ್ಮಕ ಎಂಬುದು ಯಾವಾಗಲೂ ಇರಬೇಕು. ಆಸಕ್ತಿ ಪಟ್ಟು ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಂಡಿದ್ದೇನೆ. ಬೆಂಗಳೂರಿನಲ್ಲೂ ಬದಲಾವಣೆ ಮಾಡಬೇಕು ಎಂದು ಹೊರಟಿದ್ದೇನೆ. ಆದರೂ ಒಂದಷ್ಟು ಜನ ತಪ್ಪು ಕಂಡುಹಿಡಿದರು ಎಂದರು.

ಇನ್ನೂ ಬೆಂಗಳೂರು ನಗರದ ಹಿತಕ್ಕೆ ನಾವು ಕೈಗೊಂಡಿರುವ ಅನೇಕ ತೀರ್ಮಾನಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಬಹುದು, ಮಾಡಲಿ. ಆದರೆ, ಮುಂದಿನ 5 ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಅವರು ಉತ್ತಮ ನಿರ್ಧಾರ ಕೈಗೊಂಡರು ಎಂದು ಹೇಳುತ್ತಾರೆ. ಟೀಕೆ ಇಲ್ಲದೇ ಹೋದರೆ ಯಾವುದೇ ಮನುಷ್ಯನಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ಟೀಕೆ ಮಾಡಿದರು ಎಂದ ತಕ್ಷಣ ನಾನು ಸಿಟ್ಟು ಮಾಡಿಕೊಳ್ಳಲ್ಲ ಎಂದರು.

ವಿಧಾನಸೌಧ ಕಟ್ಟುವಾಗ ಖೈದಿಗಳನ್ನು ಇದರ ನಿರ್ಮಾಣಕ್ಕೆ ಬಳಸಲಾಗಿತ್ತು. ಇದರ ನಿರ್ಮಾಣಕ್ಕೆ ಕಲ್ಲು ಹೊರಿಸಲಾಗುತ್ತಿದೆ ಎಂದು ಕೆಲವರು ಕೆಂಗಲ್ ಹನುಮಂತಯ್ಯ ಅವರಿಗೆ ಚಪ್ಪಲಿ ಎಸೆದಿದ್ದರು. ಇದು ದಾಖಲೆಗಳಲ್ಲಿ ಇವೆ. ರಾಜಕಾರಣದಲ್ಲಿ ಕೆಲವರು ಮೊಟ್ಟೆಯನ್ನು ಹೊಡೆಯುತ್ತಾರೆ, ಹೂವಿನ ಹಾರವನ್ನು ಹಾಕುತ್ತಾರೆ ಎಂದರು.

ಆಗ ಮಧ್ಯ ಪ್ರವೇಶಿಸಿದ ಸುರೇಶ್ ಕುಮಾರ್‌, ಆ ರೀತಿ ನಿಮ್ಮ ವಿಚಾರದಲ್ಲಿ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಎಲ್ಲರಿಗೂ ಅವರವರ ನಟ್ಟು- ಬೋಲ್ಟ್‌ ಬಗ್ಗೆ ಕಾಳಜಿ ಇದೆ ಎಂದು ಕಾಲೆಳೆದರು.

RELATED ARTICLES
- Advertisment -
Google search engine

Most Popular