ಮೈಸೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಗುದ್ದಾಟ ತಾರಕ್ಕೇರಿರುವ ನಡುವೆ ಕ್ಲೈಮಾಕ್ಸ್ ಹಂತಕ್ಕೆ ಪಟ್ಟದಾಟ ತಲುಪಿದೆ ಎನ್ನಲಾಗುತ್ತಿದೆ. ಈ ನಡುವೆ ಎಲ್ಲೆಡೆ ಡಿಕೆ ಅಭಿಮಾನಿಗಳು ವಿಶೇಷ ಪೂಜೆ ಹೋಮ ಹವನಗಳನ್ನು ಮಾಡಿ ಡಿಕೆಗೆ ಪಟ್ಟಕಟ್ಟಲು ದೇವರ ಮೊರೆಹೋಗುತ್ತಿದ್ದಾರೆ. ಅದೇ ರೀತಿ ಇಂದು ಮುಂಜಾನೆ ಚಾಮುಂಡಿ ಬೆಟ್ಟದಲ್ಲಿ ಬಂಡೆ ಅಭಿಮಾನಿಗಳು ಬೆಳ್ಳಿ ರಥ ಎಳೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡಿ ದರ್ಶನ ಪಡೆದು ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ರಿಗೆ ಸಿಎಂ ಪಟ್ಟ ಸಿಗಲಿ ಎಂದು ಬೆಳ್ಳಿ ಪಲ್ಲಕ್ಕಿಯಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇರಿಸಿ ಪ್ರದಕ್ಷಿಣೆ ನಡೆಸಿ ನಮ್ಮ ನೆಚ್ಚಿನ ನಾಯಕ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಳ್ಳಿ ಪಲ್ಲಕ್ಕಿಯ ಪ್ರದಕ್ಷೀಣೆ ಮುಗಿದ ನಂತರ ಡಿಕೆ ಶಿವಕುಮಾರ್ ಭಾವಚಿತ್ರವನ್ನು ಹಿಡಿದು ಪಲ್ಲಕ್ಕಿಯ ಮುಂದೆ ನಿಂತು ಅಭಿಮಾನಿಗಳು ಡಿಕೆ ಸಿಎಂ ಆಗಲಿ ಎಂದು ಘೋಷಣೆ ಕೂಡ ಕೂಗಿದ್ದಾರೆ. ಒಟ್ಟಾರೆಯಾಗಿ ಸಿಎಂ ಕುರ್ಚಿ ಹಗ್ಗಜಗ್ಗಾಟದಲ್ಲಿ ಡಿಕೆಗೆ ಈ ಎಲ್ಲ ಪೂಜೆ ಹೋಮ ಹವನಗಳು ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.



