ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತನಾಡುವುದಿಲ್ಲ” ಎಂದು ಹೇಳಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ತುಂಬಾ ವಿಷಯಗಳಿವೆ. ನನಗೆ ಎಲ್ಲವೂ ಗೊತ್ತಿದೆ. ಪೆನ್ ಡ್ರೈವ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ” ಎಂದು ಮಾರ್ಮಿಕವಾಗಿ ನುಡಿದರು.
ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, “ಕುಮಾರಸ್ವಾಮಿ ದೇವೇಗೌಡರ ಮಗ ಎಂದು ಮಾತನಾಡುವುದಿಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ರಾಮನಗರ ಜಿಲ್ಲೆ ಮಾಡಿದ್ದು ಯಾರು?. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ಸೋಲಿಸಬೇಕೆಂದು ತೀರ್ಮಾನ ಮಾಡಿದ್ರು. ಆದರೆ, ರಾಮನಗರ ಜಿಲ್ಲೆ ಮಾಡಲು ಆಗ್ತಿರಲಿಲ್ವಾ?. ಕುಮಾರಸ್ವಾಮಿಯವರೇ ಬಂದು ಮಾಡಬೇಕಿತ್ತಾ?. ಅಂದು ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಎಲ್ಲಿ, ಜಾಗ ಮಂಜೂರು ಆಗಿದ್ದೆಲ್ಲಿ?. ಮಾಯಗೊಂಡನಹಳ್ಳಿ ೯ ಎಕರೆ ತಕರಾರು ತೆಗೆದರು. ಅದನ್ನು ಬಿಟ್ಟು ಕೆಲಸ ಶುರು ಮಾಡಿ” ಎಂದರು.
“ಕನಕಪುರ ನನಗೆ ಮನೆ ಇದ್ದ ಹಾಗೆ. ಆದರೆ, ರಾಮನಗರ ಕೇಂದ್ರ ಸ್ಥಾನ. ಮೆಡಿಕಲ್ ಕಾಲೇಜ್ ವಿಚಾರದಲ್ಲೂ ರಾಜಕೀಯ ಮಾಡಬಾರದು. ಅವರದ್ಧೇ ಸರ್ಕಾರವಿದೆ. ಕನಕಪುರಕ್ಕೆ ಇನ್ನೊಂದು ಕಾಲೇಜ್ ಮಾಡಲಿ. ನನ್ನದೇನೂ ತಕರಾರಿಲ್ಲ. ಆದರೆ, ರಾಮನಗರ ಮೆಡಿಕಲ್ ಕಾಲೇಜ್ ಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡಬೇಡಿ. ಕುಮಾರಸ್ವಾಮಿ ಅವರು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ” ಎಂದರು.
“ಡಿಸಿಎಂ ಡಿ.ಕೆ.ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವುದಕ್ಕೆ ಹೋಗುವುದಿಲ್ಲ. ಅವರ ಕ್ಷೇತ್ರದ ಬಗ್ಗೆ ಅವರು ಮಾತನಾಡಿದರೆ, ನಾನೇಕೆ ಆ ರೀತಿ ಮಾತನಾಡಲಿ. ಈ ವಿಷಯ ಹೇಳಿದ್ರೆ, ವ್ಯಕ್ತಿ ದ್ವೇಷನಾ? ಇಂಥದು ಬಹಳ ಇದೆ. ಹೋರಾಟ ನಡೆದಿದ್ದು ಸತ್ಯ. ಇದು ಇಲ್ಲಿಗೆ ನಿಲ್ಲುವುದಿಲ್ಲ” ಎಂದು ಹೇಳಿದರು.