ಬೆಂಗಳೂರು: ತಹಸೀಲ್ದಾರ್ ಕಛೇರಿಗೆ ಸಮಸ್ಯೆಗಳನ್ನು ಹೊತ್ತು ಬರುವ ಬಡವರ ಕಣ್ಣೀರು ಒರೆಸುವುದಕ್ಕಿಂದ ಪುಣ್ಯದ ಕೆಲಸ ಬೇರೆ ಇಲ್ಲ, ಮಾಸಲು ಬಟ್ಟೆಯಲ್ಲಿ, ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕೆ.ಎ.ಎಸ್ ಅಧಿಕಾರಿಗಳ ಸಂಘದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ ೨೦೨೪ನೇ ಸಾಲಿನ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸವೆದ ಚಪ್ಪಲಿ, ಹರಕಲು ಚೆಡ್ಡಿ, ಮಾಸಿದ ಬಟ್ಟೆ ಧರಿಸಿ ಕಛೇರಿಗಳಿಗೆ ಬರುವ ಅವಿದ್ಯಾವಂತರ ಪರವಾಗಿ ನಿಮ್ಮ ಹೃದಯ ಮಿಡಿಯಬೇಕು. ನೀವು ಒಳ್ಳೆಯ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಛೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ, ಎಂದು ಸಲಹೆ ನೀಡಿದ ಅವರು, ನಾವು- ನೀವು ರಾಜ್ಯದ ೭ ಕೋಟಿ ಜನರ ಹಿತ ಕಾಯುವುದಕ್ಕಾಗಿ ಇದ್ದೇವೆ. ರಾಜಕಾರಣಿಗಳು ಜನರಿಂದ ರಿನೀವಲ್ ಆದರೆ ಮಾತ್ರ ಐದು ವರ್ಷದ ಬಳಿಕವೂ ಜನ ಸೇವೆಯಲ್ಲಿ ಇರುತ್ತಾರೆ. ಆದರೆ ಕೆಎಎಸ್ ಅಧಿಕಾರಿಗಳು ೩೦ ವರ್ಷಗಳ ಕಾಲ ನಿರಂತರ ಜನ ಸೇವೆಯಲ್ಲಿ ಇರುತ್ತೀರಿ. ಆದ್ದರಿಂದ ಹೆಚ್ಚು ಜನಪರವಾಗಿ ಇದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ. ಎಂದು ಹೇಳಿದರು.
ಬಲಾಢ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸಿ. ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೆ ಜನರು ಸಿಎಂ ಬಳಿಗೆ ಬರುತ್ತಾರೆಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಬೈರತಿ ಸುರೇಶ್, ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನಿಲ್‌ಕುಮಾರ್, ಸಂಘದ ಉಪಾಧ್ಯಕ್ಷರಾದ ಚನ್ನಬಸಪ್ಪ ಭಾಗವಹಿಸಿದ್ದರು.