ಮದ್ದೂರು , ಜು. ೧೫ : ದೇಶಕಾಯುವ ಸೈನಿಕ, ಅನ್ನನೀಡುವ ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ಆ ಬೆನ್ನೆಲುಬನ್ನು ಕಾಪಾಡುವವರು ವೈದ್ದರು ಆದ್ದರಿಂದ ವೈದ್ಯರು ದೇವರಿಗೆ ಸಮಾನರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಮದ್ದೂರಿನ ಎಚ್.ಕೆ. ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ನಡೆದ ೨೦೨೨-೨೩ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮೈಸೂರು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಎಸ್. ಸದಾನಂದ ರವರಿಗೆ ಎಚ್.ಕೆ. ವೀರಣ್ಣಗೌಡ ವೈದ್ಯಕೀಯ ಪ್ರಶಸ್ತಿ ನೀಡಿ ದಂಪತಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ನಾನೊಬ್ಬ ಮಾಜಿ ಸೈನಿಕ, ನಾನು ಸೇನೆಯಲ್ಲಿದ್ದಾಗ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ನನ್ನ ದೇಹಕ್ಕೆ ಗುಂಡು ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲಿ ನನಗೆ ದೇವರಾಗಿ ಬಂದು ನನ್ನ ಜೀವ ಉಳಿಸಿದವರು ವೈದ್ಯರು. ಜಯದೇವ ಆಸ್ಪತ್ರೆ ಡಾ ಸಿ.ಎನ್. ಮಂಜುನಾಥ್‌ರವರ ನೇತೃತ್ವದಲ್ಲಿ ದೇಶದಲ್ಲಿಯೇ ಮಾದರಿಯಾಗಿದೆ. ಡಾ ಸದಾನಂದ್‌ರವರು ಸಾವಿರಾರು ಬಡರೋಗಿಗಳ ಜೀವವನ್ನು ಉಳಿಸಿದ್ದಾರೆ. ಆದ್ದರಿಂದ ಅವರಿಗೆ ವೀರಣ್ಣಗೌಡ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ಗುರಿ ಮತ್ತು ಛಲ ಇಟ್ಟುಕೊಂಡು ಮೊಬೈಲ್‌ನಿಂದ ದೂರವಿದ್ದು, ಚೆನ್ನಾಗಿ ಓದಿ ಡಾ ಸದಾನಂದ್‌ರ0ತಹ ಮಹನಿಯರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಿ ಈ ಭೂಮಿ ಮೇಲೆ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬೇಕು ಎಂದರು.
ಸಮಾರಂಭದಲ್ಲಿ ಡಾ ಸದಾನಂದ್, ಡಾ ಶ್ವೇತಾಸದಾನಂದ್ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕೆ.ಟಿ. ಚಂದು, ಅಧ್ಯಕ್ಷರಾದ ಎಂ. ಸ್ವರೂಪ್‌ಚಂದ್, ಕಾರ್ಯದರ್ಶಿ ಸಿ. ಅಪೂರ್ವಚಂದ್ರ, ಜಿ.ಎಸ್. ಶಿವರಾಮು, ಪ್ರಾಂಶುಪಾಲ ಜಿ.ಎಸ್. ಶಂಕರೇಗೌಡ, ಶಿವಕುಮಾರ್, ಡಾ ಕಿರಣ್, ಎ.ವಿ. ಪ್ರದೀಪ್, ಪ್ರಕಾಶ್, ದಿನೇಶ್‌ಗೌಡ, ಹಾಜರಿದ್ದರು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.