ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡರು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೆ.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಹೇಳಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡಸ್ವಾಮೇಗೌಡ ಅವರನ್ನು ಚಿಬುಕಹಳ್ಳಿ ಕೃಷಿತ್ತಿನ ಸಹಕಾರ ಸಂಘದ ವ್ಯಾಪ್ತಿಯ ರೈತರ ಪರವಾಗಿ ಅಭಿನಂದಿಸಿ ಅವರು ಮಾತನಾಡಿದರು. ನಿರ್ದೇಶಕ ಸ್ಥಾನದಿಂದ ಅಧ್ಯಕ್ಷ ಸ್ಥಾನದವರೆಗೆ ದೊಡ್ಡಸ್ವಾಮೇಗೌಡ ಅವರಿಗೆ ಅಧಿಕಾರ ನೀಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೆ.ಆರ್.ನಗರ ಕ್ಷೇತ್ರಕ್ಕೆ ಇದೇ ಪ್ರಥಮ ಬಾರಿಗೆ ಈ ಅಧ್ಯಕ್ಷ ಸ್ಥಾನ ದೊರೆತ್ತಿರುವುದು ಸಹಕಾರ ಕ್ಷೇತ್ರದ ಇತಿಹಾಸದ ಪುಟ ಸೇರಲಿದ್ದು ದೊಡ್ಡಸ್ವಾಮೇಗೌಡರು ಅಧ್ಯಕ್ಷರಾಗಿರುವುದರಿಂದ ಕ್ಷೇತ್ರದ ಸಹಕಾರ ಸಂಘಗಳ ಅಭಿವೃದ್ದಿಗೆ ಮತ್ತು ಜಿಲ್ಲಾ ಸಂಘದಿಂದ ರೈತರಿಗೆ ಸವಲತ್ತು ಸಿಗಲು ಸಹಕಾರಿಯಾಗಲಿವೆ ಎಂದು ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್, ಚಿಬುಕಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್. ವೆಂಕಟೇಶ್, ನಿರ್ದೇಶಕ ಸಿ.ಎ.ಗಣೇಶ್, ಮುಖಂಡರಾದ ಜಯಂತ್, ದಮ್ಮನಹಳ್ಳಿ ಬೀರೇಗೌಡ. ಸೋಮಯ್ಯ ಸಿ.ಎಸ್. ಶಿವರಾಜು ಇದ್ದರು.



