Friday, April 18, 2025
Google search engine

Homeರಾಜ್ಯಸುದ್ದಿಜಾಲಅಂಬೇಡ್ಕರ್ ರಂತಹ ಮಹಾನುಭಾವರ ತತ್ವಾದರ್ಶಗಳನ್ನು ಯುವಜನತೆಗೆ ತಿಳಿಸಿ ಪಾಲಿಸುವಂತೆ ಪ್ರೇರಣೆ ನೀಡಿ-ದೊಡ್ಡಸ್ವಾಮೇಗೌಡ

ಅಂಬೇಡ್ಕರ್ ರಂತಹ ಮಹಾನುಭಾವರ ತತ್ವಾದರ್ಶಗಳನ್ನು ಯುವಜನತೆಗೆ ತಿಳಿಸಿ ಪಾಲಿಸುವಂತೆ ಪ್ರೇರಣೆ ನೀಡಿ-ದೊಡ್ಡಸ್ವಾಮೇಗೌಡ

ಕೆ.ಆರ್.ನಗರ: ಜಗತ್ತಿಗೆ ಮಾದರಿಯಾಗಿರುವ ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸಮಾಜದಲ್ಲಿ ಹಿಂದುಳಿದ ವರ್ಗದವರು ಮತ್ತು ಶೋಷಿತ ಸಮಾಜದವರು ರಾಜಕೀಯ ಅಧಿಕಾರ ಪಡೆಯುವಂತಾಯಿತು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಹಾಸನ-ಮೈಸೂರು ಮುಖ್ಯ ರಸ್ತೆಯ ಬಳಿ ಇರುವ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬುಧವಾರ ನಡೆದ ಬಾಬಾಸಾಹೇಬರ ೬೭ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಯುಗ ಪುರುಷನನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಸರ್ವರೂ ಗೌರವದಿಂದ ಕಾಣಬೇಕು ಎಂದರು.
ಅಂಬೇಡ್ಕರ್ ಜಯಂತಿ ಮತ್ತು ಪರಿನಿರ್ವಾಹಣಾ ದಿನಗಳನ್ನು ಆಚರಣೆ ಮಾಡುವಾಗ ಅವರ ಜೀವನದ ಸಾಧನೆ ಮತ್ತು ಸಂಕಷ್ಟಗಳನ್ನು ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿ ಆ ಮೂಲಕ ಇಂತಹ ಮಹಾನುಭಾವರ ತತ್ವಾದರ್ಶಗಳನ್ನು ಪಾಲಿಸುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಕೊಡಿಸಲಾಗಿದ್ದು ಮೂರು ವರ್ಷದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದರ ಜತೆಗೆ ಅಂಬೇಡ್ಕರ್ ಪುತ್ಥಳಿಯನ್ನು ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಇದಕ್ಕೆ ಎಲ್ಲರೂ ತಮ್ಮ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ಕೋರಿದಲ್ಲದೆ ರಾಜಕೀಯ ರಹಿತವಾಗಿ ಸಂವಿಧಾನ ಶಿಲ್ಪಿಯ ಆಶಯಗಳನ್ನು ಈಡೇರಿಸಲು ಶಾಸಕ ಡಿ.ರವಿಶಂಕರ್ ಜೊತೆಯಲ್ಲಿ ಇರಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ರಾಜಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಾಂತರಾಜುರಾಜಯ್ಯ, ದಲಿತ ಮುಖಂಡರಾದ ಹನಸೋಗೆನಾಗರಾಜು, ಡಿ.ಕೆ.ಕೊಪ್ಪಲುರಾಜಯ್ಯ, ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಕೃಷ್ಣ ಅಂಬೇಡ್ಕರ್ ಜೀವನ ಮತ್ತು ಸಾಧನೆಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂಧರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಗೀತೆಗಳನ್ನಾಡಿದ ಅಭಿಮಾನಿಗಳು ಅವರಿಗೆ ನುಡಿನಮನ ಸಲ್ಲಿಸಿ ಸಂವಿಧಾನ ಶಿಲ್ಪಿಯ ಪರವಾಗಿ ಜಯಘೋಷ ಮೊಳಗಿಸಿದರು.
ಪುರಸಭೆ ಸದಸ್ಯರಾದ ಶಂಕರ್‌ಸ್ವಾಮಿ, ಶಿವುನಾಯಕ್, ಮಾಜಿ ಸದಸ್ಯ ಕೆ.ವಿನಯ್, ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಎಸ್‌ಸಿ ವಿಭಾಗದ ಅಧ್ಯಕ್ಷರಾದ ನಂದೀಶ್, ಕಂಠಿಕುಮಾರ್, ದೊಡ್ಡೇಕೊಪ್ಪಲು ಗ್ರಾ.ಪಂ. ಸದಸ್ಯ ಕೆ.ಪಿ.ಜಗದೀಶ್, ಮುಖಂಡರಾದ ಚೆಲುವರಾಜು, ಗರುಡಗಂಭಸ್ವಾಮಿ, ಮಂಜುರಾಜ್, ಕೆಂಪಯ್ಯ, ಕುಮಾರ್, ಸುರೇಶ್, ನಂಜಯ್ಯ, ಯಶವಂತ್, ಕೀರ್ತಿರಾಜ್, ತಾ.ಪಂ. ಇಒ ಜಿ.ಕೆ.ಹರೀಶ್, ಮುಖ್ಯಾಧಿಕಾರಿ ಡಾ.ಜಯಣ್ಣ, ಬಿಇಒ ಆರ್.ಕೃಷ್ಣಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಮಾಜಗಳ ಮುಖಂಡರುಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular