ಮೈಸೂರು: ಯುದ್ಧದ ಕ್ರೆಡಿಟ್ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ, “ಪ್ರಜೆಗಳು ಪ್ರಧಾನಿ ಮೋದಿ ನೇತೃತ್ವಕ್ಕೆ ಕ್ರೆಡಿಟ್ ಕೊಡುತ್ತಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಹೊಟ್ಟೆ ಉರಿಯುತ್ತಿದೆ?” ಎಂದು ಕಿಡಿಕಾರಿದರು.
ಯುದ್ಧದ ಕ್ರೆಡಿಟ್ ಸೈನಿಕರಿಗೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, “ಯುದ್ಧದ ಕ್ರೆಡಿಟ್ ಸೈನಿಕರಿಗೆ ಸೇರಬೇಕು ಎಂಬ ಮಾತಿಗೆ ನಾನು ಸಹಮತ. ಆದರೆ ಜನರು ಮೋದಿಯ ಗಟ್ಟಿ ನಾಯಕತ್ವವನ್ನು ಗುರುತಿಸಿ ಅವರಿಗೆ ಕ್ರೆಡಿಟ್ ನೀಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿಗೂ ಕ್ರೆಡಿಟ್ ಸಿಕ್ಕಿದಂತೆ ಇವತ್ತಿಗೂ ಅಂತಹದ್ದು ನಡೆಯುತ್ತಿದೆ,” ಎಂದರು.
ಜನರ ತೆರಿಗೆ ದುಡ್ಡಲ್ಲಿ 2 ಸಾವಿರ ಕೊಟ್ಟು ನಾನೇ ಕೊಟ್ಟೆ ನಾನೇ ಕೊಟ್ಟೆ ಅಂಥ ಯಾಕೆ ಹೇಳ್ತೀರಾ? ಅದರ ಕ್ರೆಡಿಟನ್ನು ತೆರಿಗೆದಾರರಿಗೆ ಯಾಕೆ ಕೊಡಲ್ಲ? ಸಿದ್ದರಾಮಯ್ಯನಹುಂಡಿಯಲ್ಲಿ ಚಿನ್ನದ ಅಲೂಗಡ್ಡೆ, ಚಿನ್ನದ ಕಬ್ಬು ಬೆಳೆದು ಅದರಲ್ಲಿ ಬಂದ ದುಡ್ಡನ್ನ ಜನಕ್ಕೆ ಕೊಡುತ್ತೀದ್ದೀರಾ? ನನ್ನ ಹೆಂಡ್ತಿಗೂ, ಮಹಾದೇವಪ್ಪ ಹೆಂಡ್ತಿಗೂ ಫ್ರೀ ಅಂತೀರಲ್ಲ, ಆ ಫ್ರೀಗೆ ದುಡ್ಡು ಕೊಟ್ಟಿದ್ದು ಯಾರು? ಎಲ್ಲದಕ್ಕೂ ನಾನೇ ನಾನೇ ಕೊಟ್ಟಿದ್ದು ಅಂಥ ಯಾಕೆ ಕೊಚ್ಚಿ ಕೊಳ್ತೀರಾ ಎಂದು ಕಿಡಿಕಾರಿದರು.
ಮುಂಬೈ ದಾಳಿಯ ಸಂದರ್ಭದಲ್ಲಿ ಯುಪಿಎ ಸರ್ಕಾರ ಏನು ಮಾಡಲಿಲ್ಲ ಎಂಬುದನ್ನು ಸ್ಮರಿಸಿ, “ಇವತ್ತು ಸೈನಿಕರಿಗೆ ಸ್ವಾತಂತ್ರ್ಯ ನೀಡಿರುವ ಶಕ್ತಿ ಮೋದಿಯದು. ನೀವು ಮಾಡಲಾಗದ ಕಾರ್ಯವನ್ನು ಅವರು ಮಾಡಿದ್ದಾರೆ,” ಎಂದು ಗುಡುಗಿದರು.