ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರಿ ಅಧಿಕಾರಿಗಳಾಗಿರುವ ಗ್ರಾಮದ ಎಚ್.ಬಿ.ರಾಜಶೇಖರ ಮತ್ತು ಎಚ್.ಬಿ.ವೃಷಬೇಂದ್ರ ತಮ್ಮ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿ ದಿ.ಎಚ್.ಬಿ.ರಾಜಪ್ಪರ ಸ್ಮರಣಾರ್ಥ ಧ್ವನಿವರ್ಧಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು.
ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮೂರಿನ ಶಾಲೆ ಸರ್ವತೋಮುಖ ಅಭಿವೃದ್ಧಿ ಕಂಡು ಎಲ್ಲೆಡೆ ಮನೆ ಮಾತಾಗಿದೆ. ಖಾಸಗೀ ಶಾಲೆಗಳಿಗೆ ಮಾದರಿಯಾದ ಶಾಲೆ ಇನ್ನಷ್ಟು ಪ್ರಗತಿ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಈಗ ನೀಡಿರುವ ಕೊಡುಗೆ ಜತೆಗೆ ಪ್ರತಿ ವರ್ಷ ಎಲ್ಲಾ ಮಕ್ಕಳಿಗೂ ಅಗತ್ಯವಾದ ನೋಟ್ ಬುಕ್‍ಗಳನ್ನು ಕೊಡುಗೆಯಾಗಿ ನೀಡುತ್ತೇವೆ. ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಪ್ರತಿಯೊಂದು ಮಗುವನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಲಾಗುತ್ತಿದೆ. ಈ ಮಕ್ಕಳು ಮುಂದೆ ಮೌಲ್ಯ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವವುಳ್ಳ ಸಾಧಕರಾಗುವುದರಲ್ಲಿ ಸಂದೇಹವಿಲ್ಲ. ಎಲ್ಲಾ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ಎಚ್.ಬಿ.ರಾಜಶೇಖರ್ ಮತ್ತು ಎಚ್.ಬಿ.ವೃಷಬೇಂದ್ರ ತಿಳಿಸಿದರು.
ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ಸುಬ್ಬಪ್ಪ, ಶಿಕ್ಷಕರಾದ ಪ್ರಭಾಕರ, ವಿನೋದ, ಕವಿತ, ಜಯಶೀಲ ಹಾಜರಿದ್ದರು.