Thursday, September 18, 2025
Google search engine

Homeರಾಜ್ಯಬೆಂಗಳೂರು ಬಿಟ್ಟು ಹೋಗಬೇಡಿ: ಉದ್ಯಮಿಗಳಿಗೆ ಎಚ್.ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು ಬಿಟ್ಟು ಹೋಗಬೇಡಿ: ಉದ್ಯಮಿಗಳಿಗೆ ಎಚ್.ಡಿ. ಕುಮಾರಸ್ವಾಮಿ ಮನವಿ

ನವದೆಹಲಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ದನಿ ಎತ್ತಿರುವ ಉದ್ಯಮಿಗಳ ಪರ ನಿಂತಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯವನ್ನು ಬಿಟ್ಟು ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು; “ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ ಎಂದು ಕಂಪನಿಗಳಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಮತ್ತು ಕರ್ನಾಟಕ ಭ್ರಷ್ಟರ ಕೈಯ್ಯಲ್ಲಿ ಸಿಲುಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಎಂದು ಕೇಂದ್ರ ಸಚಿವರಾದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಪನಿಗಳು ರಾಜ್ಯ ಸರಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುವುದು ಬೇಡ. ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಕಂಡೆಲ್ಲೆಲ್ಲ ಕಸದ ರಾಶಿ. ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು ಎಂದು ಲೇವಡಿ ಮಾಡಿದರು.

ತೆರಿಗೆ ಹಾಕುವುದರಲ್ಲಿ ಸರಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ! ಎಂದು ಅವರು ಕಿಡಿ ಕಾರಿದ್ದಾರೆ

RELATED ARTICLES
- Advertisment -
Google search engine

Most Popular