ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ ಸಲಹೆ ನೀಡಿದರು.
ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಜಿಲ್ಲಾ, ತಾಲೂಕು ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದಾನೆ. ಪ್ರತಿನಿತ್ಯ ಸೇವಿಸುವ ಆಹಾರಗಳಿಗೆ ರಾಸಾಯನಿಕ ವಸ್ತುಗಳನ್ನು ಹೆಚ್ಚಾಗಿ ಬಳಸುವುದರಿಂದ ಆಹಾರದ ವಸ್ತುಗಳು ವಿಷಯುಕ್ತವಾಗುತ್ತಿದ್ದು ನಾವು ಸೇವಿಸುವ ಆಹಾರದಲ್ಲೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು. ಸಾರ್ವಜನಿಕರು ರೋಗ ಬಂದ ತಕ್ಷಣ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯ ಬೇಕು ಎಂದು ಹೇಳಿದರು.

ಪ್ರಾಣ ನೀಡಿದ ದೇವರಾದರೆ ಅದನ್ನು ರಕ್ಷಿಸುವವನು ವೈದ್ಯನಾಗಿದ್ದಾನೆ. ರೋಗಿಗಳ ಸೇವೆಗೈಯುವ ವೈದ್ಯರ ಸೇವೆ ಅನುಕರಣೀಯವಾಗಿದ್ದು ಸಾರ್ವಜನಿಕರು ಕೂಡ ವೈದ್ಯರೊಂದಿಗೆ ಸಂಯಮ ಹಾಗೂ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ಪಡೆಯಬೇಕು. ಅಲ್ಲದೆ ವೈದ್ಯರು ಸಮಾಜದ ರಕ್ಷಕರಿದ್ದಂತೆ, ಹಗಲಿರುಳು ರೋಗಿಗಳ ಸೇವೆ ಯಲ್ಲೇ ತಮ್ಮ ಆಯುಷ್ಯ ಕಳೆಯುತ್ತಾರೆ. ಆದ್ದರಿಂದ ವೈದ್ಯರಿಗೆ ಸಾಮಾಜಿಕ ಅತ್ಯುನ್ನತದ ಮನ್ನಣೆಯ ಅವಶ್ಯಕತೆ ಇದೆ ಎಂದು ಹೇಳಿದರು.
ನುರಿತ ವೈದ್ಯರ ತಂಡದಿಂದ ರಕ್ತದೊತ್ತಡ, ಮಧುಮೇಹ, ಕಣ್ಣು, ದಂತ, ಅಸ್ತಮಾ, ರಕ್ತ ಹೀನತೆ, ಇಸಿಜಿ, ಇಎನ್‌ಟಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಸುಮಾರು 512 ಮಂದಿಗೆ ತಪಾಸಣೆ ನಡೆಸಿ ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಗಳು ಹಾಗೂ ಜಂತು ಹುಳು ಮಾತ್ರೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ನಟರಾಜ್, ಶ್ವಾಸಕೋಶ ತಜ್ಞ ಡಾ.ಮಂಜುನಾಥ್, ಡಾ.ರವಿಚಂದ್ರನ್, ದಂತ ವೈದ್ಯರಾದ ಡಾ.ಶಿವಮಲ್ಲೇಶ್, ಡಾ.ಮಮತಾ ನಾಯಕ್, ಡಾ.ಲಕ್ಷ್ಮೀಕಾಂತ್ , ಡಾ.ದಿನೇಶ್. ಡಾ.ಅಂಬಿಕಾದಾಸ್, ಡಾ.ರೇವಣ್ಣ,ಆಡೀಯೋ ಮೆಟ್ರೀಕ್ ಅಸಿಸ್ಟೆಂಟ್ ಪೂರ್ಣಿಮಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ ರೇಖಾ, ನೇತ್ರಾಧಿಕಾರಿ ಶೇಖರ್, ಮಮತಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಜೆ ಮಹೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿರಿಗಳಾದ ಲಕ್ಷ್ಮಿಬಾಯಿ , ಭವಾನಿ, ರುಕ್ಮಿಣಿ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.