ಬೆಂಗಳೂರು: ʼನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಅವರು (ಡಿ.ಕೆ.ಶಿವಕುಮಾರ್) ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡʼ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದಿದ್ದ ಡಿಕೆಶಿ ಹೇಳಿಕೆಗೆ ಸೋಮವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ ಅವರು, ʼಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನು ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪ ಅಲ್ಲ, ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲʼ ಎಂದರು.
ನಾನು ಸತ್ಪರಿಣಾಮ ಬೀರುವ ವಿಷಯ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವಂತಹ ಮಾತುಗಳನ್ನು ಆಡುವುದಿಲ್ಲ. ನನಗೂ ಡಿಕೆ ಶಿವಕುಮಾರ್ಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರ ಬೇಧ ಇರಬಹುದಷ್ಟೆ. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು ಎಂದು ರಾಜಣ್ಣ ಹೇಳಿದರು.
ಸಿಎಂ ಬದಲಾವಣೆ ಬಗ್ಗೆ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಏಕಪಕ್ಷೀಯವಾಗಿ ನಿರ್ಧಾರ ಮಾಡಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲೇಬೇಕು ಎಂದು ತಿಳಿಸಿದರು.