Wednesday, April 1, 2026
Google search engine

Homeರಾಜಕೀಯಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯ ಹಾಳು ಮಾಡಬೇಡಿ : ಸಿಎಂ ಸಿದ್ದರಾಮಯ್ಯ

ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯ ಹಾಳು ಮಾಡಬೇಡಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆ ತೋರಿಸುತ್ತದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದೇನೆ, ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದೇ ನಮ್ಮ ಶ್ವೇತಪತ್ರ ಎಂದೂ ಹೇಳಿದ್ದಾರೆ.

ಇನ್ನೂ ವಿಜಯೇಂದ್ರ ಅವರ ಟೀಕೆಗಳಿಗೆ ಸಂಬಂಧಿಸಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ಅಂಕಿ-ಅಂಶಗಳ ಸಮೇತ ಉತ್ತರ ನೀಡಿದ್ದು, ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷವಾಗಿ ಚರ್ಚೆ ನಡೆದಿದೆ. ವಿಜಯೇಂದ್ರ ಅವರ ಪಕ್ಷದವರೂ ಸೇರಿ 21 ಜನ ವಿರೋಧ ಪಕ್ಷದ ಸದಸ್ಯರೂ ಮಾತನಾಡಿ ಎತ್ತಿದ್ದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ನಾನು ಸಿದ್ಧನಿದ್ದೇನೆ. ಉಪಚುನಾವಣೆ ಅಖಾಡದಲ್ಲಿಯೇ ನಿಮ್ಮ ಜೊತೆ ಬಹಿರಂಗ ಚರ್ಚೆಗೂ ನಾನು ಸಿದ್ಧ. ದಯವಿಟ್ಟು ಕೇವಲ ರಾಜಕೀಯ ಮಾತನಾಡಬೇಕೆಂಬ ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯ ಹಾಳು ಮಾಡಲು ಹೋಗಬೇಡಿ ಎಂದಿದ್ದಾರೆ.

ರಾಜ್ಯ ದಿವಾಳಿ ಸ್ಥಿತಿಯಲ್ಲಿದೆ ಎಂಬ ಆರೋಪದ ಹಿಂದೆ ನಮ್ಮ ಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ನಾಯಕರ ಅಸಹಾಯಕತೆ, ಹತಾಶೆ ಮತ್ತು ಅಸೂಯೆ ಇದೆ. ಯಾವ ಇಲಾಖೆಯೂ ನೌಕರರಿಗೆ ಸಂಬಳ ನೀಡಲಾಗದ ದಿವಾಳಿ ಸ್ಥಿತಿಯಲ್ಲಿಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಸುಭದ್ರವಾಗಿದೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದ್ದು, ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರು.ಗಳಷ್ಟು ಹೆಚ್ಚಿನದ್ದಾಗಿದೆ. ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ.

ಕಳೆದ ವರ್ಷ 50.66 ಲಕ್ಷ ಕೋಟಿ ರು.ಗಳ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ನಾನು ಎಂದೂ ಸಾಲ ಮಾಡಬಾರದು ಎಂದು ಹೇಳಿಲ್ಲ. ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲದ ಹಣವನ್ನು ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಹೂಡಿಕೆ ಮಾಡಿದಾಗ ಅದರಿಂದ ಬರುವ ಪ್ರತ್ಯಕ್ಷ ಮತ್ತು ಪರೋಕ್ಷ ಗಳಿಕೆ ಆರ್ಥಿಕತೆಯನ್ನು ಇನ್ನಷ್ಟು ಸದೃಡಗೊಳಿಸುತ್ತದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕತೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಯಾರು ಆರ್ಥಿಕತೆಯನ್ನು ದಿವಾಳಿ ಸ್ಥಿತಿಗೆ ತಳ್ಳಿದವರು ಎನ್ನುವುದು ಸ್ಪಷ್ಟವಾಗುತ್ತದೆ. ವಿಜಯೇಂದ್ರ ಅವರೇ ಇನ್ನೊಮ್ಮೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ, ಮಾತನಾಡೋಣ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular