ನವದೆಹಲಿ: ೧೯೯೫ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿ ಪಾಟ್ನಾದ ಹೈಕೋರ್ಟ್ ೨೦೦೮ರಲ್ಲಿ ನೀಡಿದ್ದ ತೀರ್ಪನ್ನು ಇದೇ ಆಗಸ್ಟ್ ೧೮ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಆಗಸ್ಟ್ ೨೩, ೧೯೯೫ ರಂದು, ವಿಧಾನಸಭಾ ಚುನಾವಣೆ ವೇಳೆ ಇಬ್ಬರ ಕೊಲೆ ನಡೆದಿತ್ತು. ಪ್ರಭುನಾಥ್ ಸಿಂಗ್ ಅವರ ಅಣತಿಯಂತೆ ರಾಜೇಂದ್ರ ರೈ ಮತ್ತು ದರೋಗಾ ರೈ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣವದಲ್ಲಿ ಪ್ರಭುನಾಥ್ ಸಿಂಗ್ ತಪ್ಪಿತಸ್ಥ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ, ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಈ ಎರಡು ಆಯ್ಕೆಗಳಿವೆ ಎಂದು ತಿಳಿಸಿರುವ ಪೀಠ, ಮೃತರ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚಿಸಿ ಆದೇಶ ಕೊಟ್ಟಿದೆ. ೩೦೭ ಸೆಕ್ಷನ್‌ಗಾಗಿ ಪ್ರಭುನಾಥ್ ಸಿಂಗ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿನಾಥ್.
ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ತನ್ನ ತೀರ್ಪಿನಲ್ಲಿ ಮುಖ್ಯ ಅಪರಾಧಿಯಾಗಿದ್ದ ಅಂದಿನ ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಆಡಳಿತ ಮತ್ತು ತನಿಖಾ ಸಂಸ್ಥೆಯ ಸಂಪೂರ್ಣ ಬೆಂಬಲವಿರುವುದರಿಂದ ಎಲ್ಲವೂ ಅವರ ಯೋಜನೆ ಮತ್ತು ಆಶಯದಂತೆ ನಡೆಯುತ್ತಿದೆ ಎಂದು ಹೇಳಿತ್ತು.
ಅಲ್ಲದೇ ತೀರ್ಪಿನಲ್ಲಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿರುವ ಸಂಗತಿಗಳನ್ನು ಸೇರಿಸಿರುವ ನ್ಯಾಯಾಲಯವು, ಸಿಂಗ್ ಅವರು ತಮ್ಮ ವಿರುದ್ಧದ ಸಾಕ್ಷ್ಯ ನಾಶ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಹ ತೀರ್ಪಿನಲ್ಲಿ ಉಲ್ಲೇಖಿಸಿದೆ.