Friday, April 11, 2025
Google search engine

Homeಅಪರಾಧವರದಕ್ಷಿಣೆ ಕಿರುಕುಳ ಆರೋಪ: ನವವಿವಾಹಿತೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ ಆರೋಪ: ನವವಿವಾಹಿತೆ ಆತ್ಮಹತ್ಯೆ

ಕೋಲಾರ: ಕೌಟುಂಬಿಕ ಕಲಹದಿಂದ ಬೇಸತ್ತು ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ.

ಸಹಕಾರ ನಗರದ ನಿವಾಸಿ ಮಾನಸ (24) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಒಂದು ವರ್ಷದ ಹಿಂದೆ ತಾಲೂಕಿನ ತೂರಾಂಡಹಳ್ಳಿಯ ಉಲ್ಲಾಸ್ ಗೌಡ ಹಾಗೂ ಮಾನಸ ವಿವಾಹವಾಗಿದ್ದರು. ಆದರೆ ಉಲ್ಲಾಸ್ ಗೌಡ ಕುಟುಂಬಸ್ಥರು ಮಾನಸಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಹಿಂದೆಯೂ ದೊಡ್ಡವರ ಸಮ್ಮುಖದಲ್ಲಿ ಎರಡು ಮೂರು ಪಂಚಾಯಿತಿ ರಾಜೀ ಸಂಧಾನಗಳನ್ನು ನಡೆಸಿದ್ದರು.

ರಾಜಿ ಸಂಧಾನ ಸಫಲವಾಗದ ಹಿನ್ನೆಲೆ, ವಿಚ್ಛೇದನಕ್ಕೆ ಅರ್ಜಿ ಹಾಕಿಕೊಳ್ಳಲಾಗಿತ್ತು. ಪರಿಣಾಮ ಉಲ್ಲಾಸ್ ಗೌಡ ತನ್ನ ಪತ್ನಿ ಮಾನಸಳನ್ನು ತವರು ಮನೆಗೆ ಕಳುಹಿಸಿದ್ದ. ತದ ನಂತರ ಉಲ್ಲಾಸ್ ಗೌಡ ವಿಚ್ಛೇದನ ಪಡೆದುಕೊಳ್ಳುವ ಉದ್ದೇಶದಿಂದ ನೋಟಿಸ್ ಸಹ ವಕೀಲರ ಕಡೆಯಿಂದ ಪತ್ನಿಯ ಮನೆಗೆ ಕಳುಹಿಸಿದ್ದ. ಇದರಿಂದಲೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾನಸ ಕುಟುಂಬಸ್ಥರು ಅಳಲು ತೊಡಿಕೊಂಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಾನಸ, ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಜೀವನ ಉಲ್ಲಾಸ್ ಫ್ಯಾಮಿಲಿಯಿಂದ ಕಷ್ಟ ಆಗಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ವಾಪಸ್ ಮಾಡಿ ಎಂದು ಡೆತ್‌ನೋಟ್ ಬರೆದು ಇಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪೋಷಕರು ಪೋಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ನಗರದ ಆರ್‌ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಕ್ಷಿಣೆ ಕಿರುಕುಳ, ಅನುಮಾನಸ್ಪದ ಸಾವು ಹಾಗೂ ಡೆತ್‌ನೋಟ್ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular