ಕೆ.ಆರ್.ನಗರ: ಬರಗಾಲದಿಂದ ದೇಶ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲು ಅಂದು ಕೇಂದ್ರದ ಕೃಷಿ ಮಂತ್ರಿಯಾಗಿದ್ದ ಡಾ.ಬಾಬು ಜಗಜೀವನ್‌ರಾಂ ಕೊಡುಗೆ ಅಪಾರವಾಗಿದೆ ಎಂದು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿ ಬಳಿ ತಾಲೂಕು ಆಡಳಿತದ ವತಿಯಿಂದ ನಡೆದ ಬಾಬೂಜಿರವರ ೩೭ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಆಹಾರದ ಕೊರತೆ ಎದುರಾದಾಗ ಹಸಿರು ಕ್ರಾಂತಿ ಜಾರಿಗೆ ತಂದು ಆಹಾರ ಉತ್ಪಾದನೆಯನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಕೇಂದ್ರದ ಸಚಿವರಾಗಿ, ಉಪಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದಲ್ಲದೆ ರೈತರು, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಉದ್ದಾರಕ್ಕಾಗಿ ಶ್ರಮಿಸಿದ ಮಹಾನ್ ನಾಯಕ ಬಾಬುಜಗಜೀವನ್‌ರಾಂ ಇವರ ಸ್ಮರಣೆಯನ್ನು ಜ್ಯಾತ್ಯಾತೀತವಾಗಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು. ಜಗಜೀವನ್‌ರಾಂ ರವರ ಸೇವೆಯಿಂದ ಪ್ರೇರೆಪಿತರಾಗಿದ್ದ ರಾಜೀವ್‌ಗಾಂಧಿರವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿಧನರಾದ ಬಾಬೂಜೀ ಅವರ ಸಂಸ್ಕಾರವನ್ನು ರಾಜ್‌ಘಾಟ್ ನಲ್ಲಿ ಮಾಡಿ ಅವರ ಸ್ಮಾರಕ ನಿರ್ಮಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ ಇದನ್ನು ಮಾದಿಗ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದು ಕೋರಿದರು. ಈ ಸಂಧರ್ಭದಲ್ಲಿ ತಾಲೂಕು ಆಡಳಿತದ ವತಿಯಿಂದ ಬಾಬೂಜಿ ಅವರಿಗೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಲಾಯಿತು. ತಹಶೀಲ್ದಾರ್‌ಗಳಾದ ಸಂತೋಷ್‌ಕುಮಾರ್, ತಿಮ್ಮಪ್ಪ, ಉಪ ತಹಶೀಲ್ದಾರ್ ಬಾಲಸುಬ್ರಮಣ್ಯ, ಇಒ ಹೆಚ್.ಕೆ.ಸತೀಶ್, ಬಿಇಒ ಆರ್.ಕೃಷ್ಣಪ್ಪ, ಸಿಆರ್‌ಪಿ ವಸಂತಕುಮಾರ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಮುಖಂಡರಾದ ಎಂ.ಎಸ್.ರವಿಕುಮಾರ್, ಹೆಬ್ಬಾಳುಮಂಜು, ರವಿಪೂಜಾರಿ ಹಾಜರಿದ್ದರು.