ಕೆ.ಆರ್.ನಗರ : ಪಟ್ಟಣದ ಬನ್ನಿಮಂಟಪ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬುಜಗಜೀವನ್ರಾಮ್ ಸಮುದಾಯ ಭವನಕ್ಕೆ ೫೦ಲಕ್ಷ ರೂ. ಅನುದಾನ ನೀಡಲಾಗಿದ್ದು ಕಾಮಗಾರಿ ಸಂಪೂರ್ಣಗೊಳಿಸಲು ಬೇಕಾಗಿರುವ ೫ರಿಂದ ೧೦ ಲಕ್ಷ ರೂ. ಅನುದಾನ ಒದಗಿಸಿ ಕಾರ್ತಿಕ ಮಾಸದಲ್ಲಿ ಭವನ ಉದ್ಘಾಟನೆ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಪುರಸಭೆಯ ಆವರಣದಲ್ಲಿರುವ ಡಾ.ಬಾಬುಜಗಜೀವನ್ ರಾಮ್ ಪುತ್ಥಳಿ ಬಳಿ ಅವರ ೪೦ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಲವು ಗ್ರಾಮಗಳಲ್ಲಿ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ದೂರುಗಳಿದ್ದು ಸಮಾಜ ಕಲ್ಯಾಣಾಧಿಕಾರಿಗಳು ಗ್ರಾಮಗಳಿಗೆ ತೆರಳಿ ಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸರ್ಕಾರದಿಂದ ೩.ಕೋಟಿ.೫೦ಲಕ್ಷ ಮತ್ತು ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಶಾಸಕರುಗಳಿಗೆ ನೀಡಿದ್ದ ೫೦ ಕೋಟಿ ವಿಶೇಷ ಅನುದಾನದಲ್ಲಿ ೧ ಕೋಟಿ ರೂ.ಅನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ನೀಡಲಾಗಿದ್ದು, ಮುಂದಿನ ಒಂದು ವರ್ಷದೊಳಗೆ ಭವನದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಹಂತಕ್ಕೆ ಬರಲಿದೆ ಎಂದರು.
ಜಗಜೀವನರಾಮ್ ಅವರು ಕ್ರಾಂತಿಕಾರಿ ಬದಲಾವಣೆ ತಂದು ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾಗಿದ್ದಾರೆ, ಇದಕ್ಕೆ ಅವರ ಪಡೆದಂತಹ ಶಿಕ್ಷಣವೇ ಬಹಳ ಪ್ರಮುಖವಾಗಿದೆ, ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಆದಿಜಾಂಭವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ದಲಿತ ಮುಖಂಡ ಡಿ.ಕೆ.ಕೊಪ್ಪಲು ರಾಜಯ್ಯ, ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ಮಾತನಾಡಿದರು.
ತಾ.ಪಂ. ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಕಾಂತರಾಜ್, ಕೋಳಿಪ್ರಕಾಶ್,ಮಾಜಿ ಸದಸ್ಯ ಶಂಕರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಮುಖಂಡರಾದ ಎಂ.ಎಸ್.ರವಿಕುಮಾರ್, ಮಹದೇವನಾಯಕ, ಸಿದ್ದಯ್ಯ, ಕಂಠಿಕುಮಾರ್, ಸಿದ್ದಪುರಕಾಳಯ್ಯ, ತಿಮ್ಮಶೆಟ್ಟಿ, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಬಿಇಓ ಆರ್.ಕೃಷ್ಣಪ್ಪ ಹಾಜರಿದ್ದರು.



