ಮೈಸೂರು : ಡಾ. ಶುಶ್ರುತ್ ಹೆಚ್.ವಿ. ಗೌಡರವರು ವಿದೇಶದಲ್ಲಿ ೨೦ ವರ್ಷ ವೈದ್ಯರಾಗಿ ಸೇವೆಸಲ್ಲಿಸಿ ನಮ್ಮ ದೇಶದ ಜನರಿಗೆ ಸೇವೆ ಮಾಡಬೇಕೆಂದು ಇಲ್ಲಿಗೆ ಬಂದು ಗ್ರಾಮೀಣ ಮತ್ತು ನಗರದ ಕೊಳಚೆ ಪ್ರದೇಶದ ಬಡಜನರಿಗೆ ಉಚಿತ ಸೇವೆ ಮಾಡುತ್ತಿದ್ದಾರೆ. ಡಾ. ಶುಶ್ರುತ್ ಹೆಚ್.ವಿ. ಗೌಡರಂತಹ ಸೇವಾ ಮನೋಭಾವವಿರುವ ವೈದ್ಯರು ಹೆಚ್ಚಾಗಬೇಕೆಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ತಿಳಿಸಿದರು.
ಮೈಸೂರಿನ ಗೋಪಾಲಗೌಡ ಶಾಂತವೇರಿ ಮೆಮೋರಿಯಲ್ ಆಸ್ಪತ್ರೆಯ ನ್ಯೂರೋಜೋನ್ ವತಿಯಿಂದ ಮೈಸೂರು ಜಿಲ್ಲೆಯ ಆಶಾಕಾರ್ಯಕರ್ತೆಯವರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಶುಶ್ರುತ್ ನಾನು ಜೊತೆಯಲ್ಲೇ ಓದಿದವರು.
ಇವರ ತಂದೆ ಡಾ. ವಿಷ್ಣಮೂರ್ತಿಯವರು ವೈದ್ಯರಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಿದ್ದರು. ಅದರಂತೆಯೇ ಡಾ|| ಶುಶ್ರುತ್ ಸಹ ಕಳೆದ ೨ ವರ್ಷಗಳಿಂದ ಸುಮಾರು ೪೦ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿ ೮ ಸಾವಿರ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಇವರ ಸೇವೆ ಈ ನಾಡಿಗೆ ಹೀಗೆಯೇ ಮುಂದುವರೆಯಲಿ ಎಂದರು.
ಮೈಸೂರು ಜಿಲ್ಲಾ ಪೊಲೀಸ್ ಅದೀಕ್ಷಕರಾದ ಸೀಮಾಲಾಟ್ಕರ್ ಮಾತನಾಡಿ ಕೋವಿಡ್ ಸಮಯದಲ್ಲಿ ಆಶಾಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸರ್ವೆ ಮಾಡಿ ಔಷಧಿ ನೀಡಿ ಜೀವದ ಹಂಗನ್ನು ತೊರೆದು ಕೆಲಸ ಮಾಡಿದ್ದಾರೆ. ಅವರ ಆರೋಗ್ಯವು ಮುಖ್ಯವಾಗಿದ್ದು, ಎಲ್ಲರು ಬಂದು ಚಿಕಿತ್ಸೆ ಪಡೆಯಬೇಕು ಎಂದ ಅವರು, ಸಾರ್ವಜನಿಕರು. ದುಶ್ಚಟ, ಡ್ರಗ್ಸ್ ಮಾಫಿಯಾದಿಂದ ದೂರವಿರಬೇಕು ಟ್ರಾಫಿಕ್ ರೂಲ್ಸ್ಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ನ್ಯೂರೋಜೋನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶುಶ್ರುತ, ಹೆಚ್.ವಿ. ಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರ ಕೋರಿಕೆಯ ಮೇರೆಗೆ ಈ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೇವೆ. ದೇಶದಲ್ಲಿ ೧೦ ಲಕ್ಷ ಆಶಾಕಾರ್ಯಕರ್ತೆಯರಿದ್ದಾರೆ. ಕೋವಿಡ್ ಸಮಯದಲ್ಲಿ ಸೈನಿಕರಂತೆ ಕೆಲಸಮಾಡಿ ಜನರ ಜೀವ ಉಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ನ್ಯೂರೋಜೋನ್‌ನ ಆಡಳಿತಾಧಿಕಾರಿ ಧನ್ಯಾ ಶುಶ್ರುತ ಪ್ರಾಂಶುಪಾಲರಾದ ಯಶೋಧ ಹಾಜರಿದ್ದರು.