ಮಂಡ್ಯ: ಬರ ಪರಿಸ್ಥಿತಿ ಹಿನ್ನಲೆ ಜನರಿಗೆ ಸ್ಥಳೀಯವಾಗಿ ಮನರೇಗಾ ಹಾಗೂ ಇನ್ನಿತರ ಯೋಜನೆಯಡಿ ಕೆಲಸ ನೀಡಿ ಕೂಲಿ-ಕಾರ್ಮಿಕರು ವಲಸೆ ಹೋಗದಂತೆ ನೋಡಿಕೊಳ್ಳಿ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ ಪ್ರಕಾಶ್ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಅವಲೋಕನ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಬರಗಾಲ ಬಂದಾಗ ಕೃಷಿಕರು ಹಾಗೂ ಗ್ರಾಮಸ್ಥರು ದುಡಿಯುವುದಕ್ಕೆ ಊರು ಬಿಟ್ಟು ಹೋಗುತ್ತಾರೆ. ಆಗಾಗಿ ಅಂತಹ ಜನರು ವಲಸೆ ಹೋಗುವುದನ್ನು ತಡೆಯಿರಿ. ಸ್ಥಳೀಯವಾಗಿ ಅವರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ. ಕೃಷಿ ಹೊಂಡ, ಹೂಳು ಎತ್ತುವುದು ಸೇರಿದಂತೆ ಇನ್ನಿತರ ಕೆಲಸ ನೀಡಿ ಎಂದರು.
ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಮನವಿ ಸಲ್ಲಿಸುವವರಿಗೆ ಆದ್ಯತೆ ಮೇಲೆ ವಯೋಮಾನ ಆಧಾರಿಸಿ ಅವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ ಎಂದರು. ನರೇಗಾ ಯೋಜನೆಯಡಿ ದಿನಗೂಲಿ ರೂ.316 ನೀಡುತ್ತಾರೆ. ಅದನ್ಬು ಸಾರ್ವಜನಿಕರು ಸಮರ್ಪಕವಾಗಿ ಬಳಕೆಮಾಡಿರಿ. ಹೆಚ್ಚುವರಿ ಕೆಲಸ ಬೇಕಿದ್ದರೆ ಜಿಲ್ಲೆಗೆ ಮಾಹಿತಿ ನೀಡಿ, ಕೆಲಸ ನೀಡಿ ಎಂದರು. ಬರ ಪರಿಸ್ಥಿತಿ ನಿರ್ವಹಣೆಯ ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ. ಪಂಚಾಯತಿಯ ಅಧಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಾಹಿಸುವಂತೆ ತಾಕೀತು ಮಾಡಿರಿ ಎಂದರು.
ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರದ ಯೋಜನೆಗಳು ಕೂಡ ನೆರವಾಗಲಿವೆ ಎಂದರು. ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ, ಪ್ರತಿ ಮಾಹೆ ಡಿ.ಬಿ.ಟಿ ಮುಖೇನ ಹಣ ಸಂದಾಯವಾಗುತ್ತಿದೆಯಾ ಎಂದು ಖಾತರಿ ಮಾಡಿಕೊಳ್ಳಿ. ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಜಿಲ್ಲೆಯ ಏಳು ತಾಲ್ಲೂಕುಗಳು ಬರ ಎಂದು ಘೋಷಣೆಯಾಗಿದೆ. ಎಲ್ಲಾ ನೋಡಲ್ ಅಧಿಕಾರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ ಎಂದರು. ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಉಪಸ್ಥಿತರಿದ್ದರು.
