ಕನಕಪುರ: ಹೊಸ ಕಬ್ಬಾಳು ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ 1987 88 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ತಮಗೆ ಬೋಧನೆ ಮಾಡಿದ ಹಿರಿಯ ಶಿಕ್ಷಕರಿಗೆ ಗುರು ವಂದನ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಗುರು ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಶಿಕ್ಷಕರಾದ ಶಿವಲಿಂಗಯ್ಯನವರು, ಈ ಶಾಲೆಯಲ್ಲಿ ಮೂವತ್ತು ಎಂಟು ವರ್ಷದ ಹಿಂದೆ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ತಮಗೆ ವಿದ್ಯದಾನ ಮಾಡಿದ ಗುರುಗಳಿಗೆ ಈ ದಿನ ಗುರು ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ, ಇದರಿಂದ ಗುರು ಶಿಷ್ಯರ ಸಂಬಂಧ ಎಷ್ಟೇ ವರ್ಷ ಕಳೆದರೂ ಸ್ಥಿರವಾಗಿರುತ್ತದೆ ಎಂದು ತಿಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಸಂಬಂಧ ಕಡಿಮೆಯಾಗುತ್ತಿದೆ ಆದರೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತ್ತೀಚಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮಗಳು ಮಾದರಿಯಾಗುತ್ತವೆ. ವಿದ್ಯಾ ದಾನ ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನ ಆದ್ದರಿಂದ ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು, ಎಲ್ಲಾ ವೃತ್ತಿ ಗಿಂತ ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಾಗಿದೆ. ಆದ್ದರಿಂದ ಶಿಕ್ಷಕರು ತಮ್ಮ ವ್ಯಕ್ತಿತ್ವ ಭಾಷೆ ನುಡಿ ವೇಷ ಭೂಷಣ ನಡತೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗಿಂತ ಮಾದರಿಯಾಗಿರಬೇಕು ಆಗ ಮಾತ್ರ ಶಿಕ್ಷಕ ವೃತ್ತಿಗೆ ವಿಶೇಷವಾದ ಸ್ಥಾನಮಾನ ದೊರಕುತ್ತದೆ ಎಂದು ಇತ್ತೀಚಿನ ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದರು.

ಈ ಶಾಲೆಯ ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಸಿ ಪುಟ್ಟಸ್ವಾಮಿರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಈ ಶಾಲೆ ಸುಮಾರು 38 ವರ್ಷಗಳ ಹಿಂದೆ ಒಂದು ಹಳ್ಳಿಯಲ್ಲಿ ಸ್ಥಾಪನೆಯಾಗಿ ಈ ಶಾಲೆಯ ಸುತ್ತಮುತ್ತ ಇರುವ ಹತ್ತಾರು ಹಳ್ಳಿಗಳ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಸಮಾಜದ ಉನ್ನತ ವ್ಯಕ್ತಿಯಾಗಿ ಎತ್ತರ ಸ್ಥಾನಕ್ಕೆ ಬೆಳೆದಿದ್ದಾರೆ. ಆದ್ದರಿಂದ ನಾವು ಬೋಧನೆ ಮಾಡಿದ್ದಕ್ಕೆ ಸಾರ್ಥಕವಾಯಿತು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಯರಾದ ನಾಗರಾಜು, ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಂಶುಪಾಲರಾದ ಶ್ಯಾಮಲಾ ರವರು ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟು ಅಭ್ಯಾಸ ಮಾಡಬೇಕು, ಎಂದು ಹಿತವಚನವನ್ನು ಹೇಳಿದರು.
ಈ ಗುರುವಂದನ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ರೇವಣ್ಣ, ಶಿವಕುಮಾರ್, ಪುಟ್ಟೇಗೌಡ, ಹಾಗೂ ಎಲ್ಲ ಹಿರಿಯ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.