ಚಾಮರಾಜನಗರ : ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮಿ ರವರ ಕೊಡುಗೆಗಳ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ವಿಚಾರ ಸಂಕಿರಣ ಜರುಗಿತು.
ವಿಚಾರ ಸಂಕಿರಣವನ್ನು ಕೊಳ್ಳೇಗಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಗರಹಳ್ಳಿ ನಾಗರಾಜು ಉದ್ಘಾಟಿಸಿ ಮಾತನಾಡಿ ವಿಶೇಷ ಮಹತ್ವ ಪಡೆದ ಗುರುಗಳಾಗಿದ್ದಾರೆ. ಶಿಕ್ಷಣ ,ಆರೋಗ್ಯ ಮತ್ತು ದಾಸೋಹಕ್ಕೆ ಶಿವಕುಮಾರಸ್ವಾಮಿ ಅನ್ವರ್ಥರಾಗಿದ್ದಾರೆ. ಜಾತಿ ಮತ ಪಂಥ ಧರ್ಮ ಭೇದವಿಲ್ಲದೆ ಸರ್ವರಿಗೂ ಶಿಕ್ಷಣ ಹಾಗು ದಾಸೋಹವನ್ನು ನೀಡಿ ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜಗದೀಶ್ ರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿವಕುಮಾರಸ್ವಾಮಿ ಅವರ ಕೊಡುಗೆಗಳ ಕುರಿತು ವಿಚಾರ ಸಂಕೀರ್ಣ ಹಮ್ಮಿಕೊಂಡಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಪದ್ಮಾಪುರುಷೋತ್ತಮ್ ,ಬೂದಿ ತಿಟ್ಟು ಲಿಂಗರಾಜು, ಬಿಕೆ ಆರಾಧ್ಯ ಲಕ್ಷ್ಮಿ ನರಸಿಂಹ, ಶಿವಕುಮಾರ ಸ್ವಾಮೀ ಅವರ ಕುರಿತು ಮಾತನಾಡಿ 111 ವರ್ಷಗಳ ಕಾಲ ಬದುಕಿ ಬಾಳಿ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿ ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿದ ಮಹಾದಾಸೋಹಿ. ಪ್ರೀತಿ ವಾತ್ಸಲೆಗಳ ಮಮಕಾರದ ವ್ಯಕ್ತಿಯಾಗಿದ್ದವರು ಸರಳತೆಯಿಂದ ಶ್ರೀ ಮಠವನ್ನು ಬೆಳೆಸಿದವರು. ಭಕ್ತರ ಕಾಣಿಕೆ ಮಠದ ಆಧಾರವೆಂದು ನಯವಾಗಿ ಸರ್ಕಾರದ ಅನುದಾನವನ್ನು ನಿರಾಕರಿಸಿದ ಮಹಾನ್ ವ್ಯಕ್ತಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ ಶಿವಕುಮಾರ ಸ್ವಾಮಿಯವರು ಘನಮನ ಸಂಪನ್ನರು. ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಯುಗ ಸಿರಿಯಾಗಿ ಬೆಳಗಿದವರು. ಸರ್ವರಲ್ಲೂ ಶಿವನನ್ನು ಕಂಡವರು. ಮಾತೃ ಹೃದಯಿಗಳಾದ ಶಿವಕುಮಾರ ಸ್ವಾಮಿಯವರು ಕೋಟ್ಯಾಂತರ ನೊಂದ ಹಾಗೂ ಹಸಿದ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮತ್ತು ಅನ್ನದಾಸೋಹವನ್ನು ನೀಡಿ ಜಗತ್ತಿಗೆ ಬೆಳಕಾದವರು. ಅವರ ಸ್ಮರಣೆ ನಮ್ಮ ಪುಣ್ಯ. ಅವರು ನಮ್ಮ ಕಾಲದಲ್ಲಿ ನಮಗೆ ದರ್ಶನ ನೀಡಿಆಶೀರ್ವಾದ ನೀಡಿದ ಪುಣ್ಯವಂತ ದೈವಿಕರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್,ಶಿವಲಿಂಗಮೂರ್ತಿ, ಸರಸ್ವತಿ, ಸುರೇಶಗೌಡ,ಪರಶಿವ ಶೆಟ್ಟಿ, ಮಹದೇವಸ್ವಾಮಿ, ರಂಗಸ್ವಾಮಿ, ಶೇಖರ್, ಮಹೇಶ, ಶಿವಶೆಟ್ಟಿ ಇದ್ದರು.



