ಯಳಂದೂರು: ಗಂಗವಾಡಿ ಗ್ರಾಮದ ವೀರಗಾಸೆ ಕಲಾವಿದ ಡಾ. ಶಿವರುದ್ರಸ್ವಾಮಿ ಹಾಗೂ ಉಮ್ಮತ್ತೂರು ಗ್ರಾಮದ ಮತ್ತೊಬ್ಬ ವೀರಗಾಸೆ ಕಲಾವಿದ ಎಂ. ಜಯಕುಮಾರ್ ರವರಿಗೆ ತಮಿಳುನಾಡಿನ ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರಲ್ ಅಕಾಡೆಮಿಯವರು ನೀಡುವ ಆರ್‍ಟ್ ಇಂಟರ್‌ನ್ಯಾಷನಲ್ ಏಕಿಲೆನ್ಸ್ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಲಾಗಿದೆ.
ಗಂಗವಾಡಿ ಗ್ರಾಮದ ನಾಗಣ್ಣ, ಸುಂದ್ರಮ್ಮ ಎಂಬುವವರ ಪುತ್ರರಾದ ಡಾ. ಶಿವರುದ್ರಸ್ವಾಮಿ ವೀರಗಾಸೆ ಕಲೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಕಳೆದ ೪೦ ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿ ಪರಂಪರಾನುಗತವಾಗಿ ಬಂದ ಈ ಕಲೆಯನ್ನು ತಮ್ಮ ಮಗನಿಗೂ ಧಾರೆ ಎರೆದಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ದಸರಾ, ದೆಹಲಿಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲೂ ರಾಜ್ಯವನ್ನು ಪ್ರತಿನಿಧಿಸಿರುವ ಇವರು ನೂರಾರು ಕಡೆ ತಮ್ಮ ಸಾಧನೆಯನ್ನು ಮಾಡಿದ್ದಾರೆ. ಇದರೊಂದಿಗೆ ಸಮೀಪದ ಉಮ್ಮತ್ತೂರು ಗ್ರಾಮದ ಎಂ. ಜಯಕುಮಾರ್ ಕೂಡ ವೀರಗಾಸೆ ಕಲೆಯಲ್ಲಿ ಹಲವು ದಶಕಗಳಿಂದ ದುಡಿಯುತ್ತಿದ್ದಾರೆ. ಇವರಿಗೂ ಕೂಡ ಅನೇಕ ಪ್ರಶಸ್ತಿಗಳು ಲಭಿಸಿದ್ದು ಇವರಿಬ್ಬರೂ ಒಂದೇ ತಂಡದಲ್ಲಿದ್ದು ಇಬ್ಬರಿಗೂ ಕೂಡ ಏಕಕಾಲಕ್ಕೆ ಪ್ರಶಸ್ತಿ ಲಭಿಸಿರುವುದು ನಮಗೆ ಅತೀವ ಸಂತಸ ತಂದಿದೆ ಎಂದು ಇವರ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಮಾ. ೧೭ ರಂದು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವರುದ್ರಸ್ವಾಮಿ ಮಾಹಿತಿ ನೀಡಿದರು.