ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಡಾ. ಯತೀಂದ್ರ ಸಿದ್ದರಾಮಯ್ಯರವರು ಜನತಾನಗರದಲ್ಲಿ ರೋಡ್‌ಶೋ ನಡೆಸಿ ಮತ ಯಾಚಿಸಿದರು.
ನಂತರ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶವೆಲ್ಲವನ್ನು ಬ್ರಿಟಿಷರು ಕೊಳ್ಳೆಹೊಡೆದು ಬರಿದು ಮಾಡಿ ಹೋಗಿದ್ದರು. ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿಯವರು ೨೦ ಅಂಶಗಳ ಕಾರ್ಯಕ್ರಮ ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಎಂದರು. ಗರೀಬಿ ಹಠಾವೋ ಕಾರ್ಯಕ್ರಮದ ಮೂಲಕ ಬಡತನ ನಿರ್ಮೂಲನೆಗೆ ಕೃಷಿ ಕ್ಷೇತ್ರದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಮಾಡಿ ಈ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದಂತಹ ಕಾಂಗ್ರೆಸ್ ಪಕ್ಷವನ್ನು ೭೦ ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಹೇಳುವ ಬಿ.ಜೆ.ಪಿ.ಯವರು ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾರೂ ಕೂಡ ಧರ್ಮದ ಹೆಸರಲ್ಲಿ ರಾಜಕಾರಣ ಮಾಡಬಾರದು. ಮೋದಿ ಮುಖ ನೋಡಿ ಮತ ನೀಡಬೇಡಿ.
ಮೈಸೂರನ್ನು ಪ್ಯಾರೀಸ್ ಮಾಡುತ್ತೇನೆ ಎಂದಿದ್ದರು ಮಾಡಿದ್ದಾರಾ? ಪ್ರಕೃತಿ ವಿಕೋಪವಾದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ. ನಮ್ಮ ತೆರಿಗೆ ಪಾಲನ್ನು ನಮಗೆ ಕೊಡುತ್ತಿಲ್ಲ. ಚುನಾವಣೆ ಬಂದಾಗ ಬಂದು ಟಾಟಾ ಮಾಡಿ ಹೋಗುವವರಿಗೆ ಮತ ನೀಡಬೇಕೆ? ನೀವೇ ಯೋಚಿಸಿ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ೫ ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದೆ. ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳಿವೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಬೆಂಬಲಿಸುವ ಮೂಲಕ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಮೇಯರ್‌ಗಳಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಟಿ.ಬಿ. ಚಿಕ್ಕಣ್ಣ, ಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯ ಗೋಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಬಿ. ರವಿ, ಹೇಮಾವತಿ, ಹರೀಶ್ ಮೊಗಣ್ಣ, ಜಿ.ಕೆ. ಬಸವಣ್ಣ, ಸ್ವಾಮಿಗೌಡ, ಮನೋಜ್, ಪರಮೇಶ್ ಹಾಜರಿದ್ದರು.