ಮಂಡ್ಯ: ಆಧುನಿಕ ಯುಗದ ತಾಂತ್ರಿಕ ಜೀವನದಲ್ಲಿ ಕೆಲಸದ ಒತ್ತಡ ನಿವಾರಿಸಿಕೊಳ್ಳಲು ಯೋಗ ಮತ್ತು ಧ್ಯಾನ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳ ಒತ್ತಡ ನಿವಾರಣೆ ಕುರಿತ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಪ್ರತಿದಿನ ಕೆಲಸ ಮುಗಿದ ನಂತರ ನಾವು ಮಾಡುವ ಕೆಲಸ ಆತ್ಮತೃಪ್ತಿ ತರಬೇಕು. ಒತ್ತಡ ಇಲ್ಲದೇ ಕೆಲಸ ನಿರ್ವಹಿಸಲು ಕಲೆ, ಕ್ರೀಡೆ, ಸಾಹಿತ್ಯದಂತಹ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದರು.
ಪ್ರೀತಿಯನ್ನು ನಾವೂ ಮಾಡುವ ಕೆಲಸದಲ್ಲಿ ವ್ಯಕ್ತಪಡಿಸಬೇಕು. ಆತ್ಮಕ್ಕೆ ಜ್ಞಾನ, ಶಾಂತಿ, ನೆಮ್ಮದಿ, ಆತ್ಮತೃಪ್ತಿಯ ಹಸಿವು ಬೆಳೆಯುವಂತೆ ನೋಡಿಕೊಳ್ಳಿ. ಜ್ಞಾನ, ಶಾಂತಿ, ನೆಮ್ಮದಿ, ಆತ್ಮತೃಪ್ತಿಯನ್ನು ಖರೀದಿಸಲು ನಾವೇ ಬೆಳೆಸಿಕೊಳ್ಳಬೇಕು. ಇವುಗಳನ್ನು ಜೀವನದಲ್ಲಿ ರೂಡಿಸಿಕೊಂಡರೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಪ್ರತಿದಿನ ಕೆಲಸದ ನಂತರ ಕುಟುಂಬದೊಂದಿಗೆ ಸಮಯ ಕಳೆಯಿರಿ. ನಾವು ಮಾಡುವ ಕೆಲಸಕ್ಕೆ ಪ್ರತಿಫಲ ದೊರೆಯುವುದೇ ಕುಟುಂಬದ ಪ್ರೀತಿಯಲ್ಲಿ ಎಂದರು.
ಉನ್ನತ ಮಟ್ಟದ ಅಧಿಕಾರಿಗಳು ಸಿಬ್ಬಂದಿ ವರ್ಗದವರಿಗೆ ಒತ್ತಡ ಮುಕ್ತ ಸನ್ನಿವೇಶವನ್ನು ಕಲ್ಪಿಸಿ ಕೊಡಬೇಕು. ಸರ್ಕಾರಿ ಅಧಿಕಾರಿಗಳು ಇಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಆಗಾಗಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಕೆಲಸ ನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಿಇಒ ಶೇಖ್ ತನ್ವಿರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಬ್ರಹ್ಮಕುಮಾರಿ ಸಮಾಜದ ಬಿ.ಕೆ ಶಾರದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭು ಗೌಡ, ಸೇರಿದಂತೆ ಇನ್ನಿತರರು ಹಾಜರಿದ್ದರು.