ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ(ಡಿಜಿ-ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಸರಕಾರ ನೇಮಿಸಿದೆ.
ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೆ, ಅವರನ್ನು ಡಿಜಿ-ಐಜಿಪಿಯಾಗಿ ನೇಮಿಸಿ ಶನಿವಾರ(ಆ.30)ದಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ.
ಅಪರಾಧ ತನಿಖಾ ವಿಭಾಗ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯಾಗಿರುವ ಡಾ.ಎಂ.ಎ.ಸಲೀಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಮಹಾ ನಿರ್ದೇಶಕರಾಗಿ (ಪೊಲೀಸ್ ಪಡೆ ಮುಖ್ಯಸ್ಥರು) ನೇಮಕ ಮಾಡಲಾಗಿದೆ. ಐಪಿಎಸ್ (ವೇತನ) ನಿಯಮಗಳು, 2016ರ ವೇತನ ಮ್ಯಾಟ್ರಿಕ್ಸ್ ಪ್ರಕಾರ ಮಾಸಿಕ 2,25,000ರೂ.ವೇತನ ನಿಗದಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಲೋಕ್ ಮೋಹನ್ ನಿವೃತ್ತರಾದ ನಂತರ ಎಂ.ಎ.ಸಲೀಂ ಅವರು 2025ರ ಮೇ 21ರಿಂದ ಪ್ರಭಾರ ಡಿಜಿ-ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು 1993ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದಾರೆ.