ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಪಾಪ ಅಮಾಯಕರಾದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿ, ಹರಕೆಯ ಕುರಿ ಮಾಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಇರಲಿಲ್ಲವೇ? ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಯಾರಿಗೂ ಡಿ.ಕೆ. ಸುರೇಶ್ ವಿರುದ್ಧ ಸ್ಪರ್ಧಿಸಲು ತಾಕತ್ತು ಮತ್ತು ಗಂಡಸುತನ ಇಲ್ಲವೇ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಪ್ರಶ್ನಿಸಿದ್ದಾರೆ.
ರಾಜಕಾರಣಕ್ಕೆ ಡಾ.ಮಂಜುನಾಥ್ ಹೊಸಬರು. ಕುಮಾರಸ್ವಾಮಿ, ಯೋಗೇಶ್ವರ್, ಹಿಂದಿನ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಸ್ಪರ್ಧಿಸಬಹುದಿತ್ತಲ್ಲ. ಯಾರೂ ರಾಜಕಾರಣಿ ಸಿಗಲಿಲ್ಲವೇ? ವೈದ್ಯರಾಗಿ ಜನಸೇವೆ ಮಾಡಿಕೊಂಡಿದ್ದ ಡಾ. ಮಂಜುನಾಥ್ ಅವರನ್ನು ಕರೆ ತಂದಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಪಕ್ಷದ ಜಾತ್ಯತೀತ ತತ್ವ, ಸಿದ್ಧಾಂತ ಗಾಳಿಗೆ ತೂರಿರುವ ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಇದು ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿರುವುದಕ್ಕೆ ಸಾಕ್ಷಿ. ಇದರಿಂದ ಬೇಸತ್ತಿರುವ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುಂಚೆಯೇ ಅವರು ಕಾಂಗ್ರೆಸ್‌ಗೆ ಬರಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಕೈ ಹಿಡಿದು ಎತ್ತಿದಾಗ ಅವರ ಧರ್ಮಪತ್ನಿಯನ್ನು ಶಾಸಕಿ ಮಾಡಿದಾಗ ಎಚ್‌ಡಿಕೆ ಪಾಲಿಗೆ ಡಿ.ಕೆ. ಶಿವಕುಮಾರ್ ಅವರು ಕಿರಾತಕರಾಗಿರಲಿಲ್ಲ. ರಾಮನಗರದಲ್ಲಿ ಮಗ ನಿಖಿಲ್ ವಿರುದ್ಧ ಮುಸ್ಲಿಂ ವ್ಯಕ್ತಿಯನ್ನು ಗೆಲ್ಲಿಸಿದ್ದಕ್ಕೆ ಕಿರಾತಕರಾಗಿಬಿಟ್ಟರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಟೀಕಿಸಿದರು.