ಧಾರವಾಡ : ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗದ ಹಿರಿಯ ತಜ್ಞ ವೈದ್ಯರಾಗಿರುವ ಡಾ. ಸಂಗಪ್ಪ ಗಾಬಿ ಅವರು ಇಂದು ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯ ನೂತನ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಅಧಿಕಾರ ವಹಿಸಿಕೊಂಡರು.
ರಾಜ್ಯ ಸರ್ಕಾರದ ಆದೇಶದಂತೆ ನಿರ್ಗಮಿತ ಡಿ.ಎಸ್. ಡಾ.ಶಿವಕುಮಾರ ಮಾನಕರ ಅವರು ಡಾ.ಸಂಗಪ್ಪ ಗಾಬಿ ಅವರಿಗೆ ಡಿ.ಎಸ್. ಹುದ್ದೆಯ ಚಾರ್ಜ್ ನೀಡಿದರು.
ಡಾ.ಸಂಗಪ್ಪ ಗಾಬಿ ಅವರು 2017 ರಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗದ ಹಿರಿಯ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಪೂರ್ವದಲ್ಲಿ ಡಾ.ಗಾಬಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತಾಧಿಕಾರಿಯಾಗಿ 2002 ರಿಂದ 2003 ರವರೆಗೆ ಮತ್ತು 2003 ರಿಂದ 2017 ರ ವರೆಗೆ ಉತ್ತರಕನ್ನಡ ಜಿಲ್ಲೆ ಜೋಯಿಡಾ ತಾಲೂಕಾ ಆಸ್ಪತ್ರೆಯಲ್ಲಿ ತಾಲೂಕಾ ವೈದ್ಯಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.
ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಕಾಯಕಲ್ಪ, ಉತ್ತಮ ವೈದ್ಯಕೀಯ ಅಧಿಕಾರಿ, ಉತ್ತರ ಕನ್ನಡ ಜಿಲ್ಲಾಡಳಿತದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.