ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮೈಸೂರು ನಗರದ ವಿವಿಧ ಅನುದಾನಿತ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಂತಿಮ ಹಂತದ ಪ್ರಚಾರ ನಡೆಸಿದರು.
ಮೈಸೂರಿನ ರಾಜೀವ್ ನಗರದ ಬಾಬು ಜಗಜೀವನ್ ರಾಂ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜು, ಸಿದ್ಧಾರ್ಥ ವಸತಿ ಶಾಲೆ, ಗಾಂಧಿನಗರ ಪ್ರಗತಿ ಪ್ರೌಢಶಾಲೆ, ಶ್ರೀ ಶಿವಯೋಗಿ ಪ್ರೌಢಶಾಲೆ ಸೇರಿ ವಿವಿಧ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರು.
ಈ ವೇಳೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರಿಗೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ಇಡೀ ದೇಶವೇ ತಿರುಗಿ ನೋಡಿದೆ. ಜಾತಿ, ಮತ ಹಾಗೂ ಧರ್ಮವನ್ನು ಮೀರಿದ ಯೋಜನೆಗಳನ್ನು ಜಾರಿಗೊಳಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಸಮಾಜದ ಅಭಿವೃದ್ಧಿ ಜತೆಗೆ ಪ್ರಬುದ್ಧ ಶಿಕ್ಷಕರ ಕ್ಷೇತ್ರದ ಸುಧಾರಣೆಗೂ ದಾರಿಯಾಗಿದೆ. ಹೀಗಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.