ಮೈಸೂರು: ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದ ಇದೇ ಸೆ.೦೭ರಂದು ಸ್ವರ್ಗಸ್ಥರಾದ ಡಾ. ಎ.ಪಿ. ಚಂದ್ರಶೇಖರ್‌ರವರಿಗೆ ದಿ.೧೦ ರಂದು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಂತಾಪ ಸೂಚನಾ ಸಭೆಯನ್ನು ಆಯೋಜಿಸಲಾಯಿತು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವನಗೌಡಪ್ಪರವರು ಸಭೆಯಲ್ಲಿ ಡಾ. ಎ.ಪಿ. ಚಂದ್ರಶೇಖರ್‌ರವನ್ನು ಸ್ಮರಿಸುತ್ತಾ ಇವರು ಉತ್ತಮ ಶಿಕ್ಷಕರಾಗಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ಶಿಕ್ಷಣ ನೀಡಿರುತ್ತಾರೆ, ಅವರು ಆಸ್ಪತ್ರೆಗೆ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ಪ್ರಸ್ತಾಪಿಸಿದರು ಶ್ರೀಯುತರು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದರು ಮತ್ತು ಸಹದ್ಯೋಗಿಗಳೊಂದಿಗೆ ಉತ್ತಮ ಸ್ನೇಹ ಭಾಂದವ್ಯವನ್ನು ಹೊಂದಿದ್ದರು.
ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು ರವರು ಮಾತನಾಡಿ ಡಾ. ಎ.ಪಿ. ಚಂದ್ರಶೇಖರ್‌ರವರು ೨೦೦೮ ರಿಂದ ೨೦೧೪ ರವರೆಗೆ ಸುಮಾರು ೬ ವರ್ಷಗಳ ಕಾಲ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಆಡಳಿತಾತ್ಮಕವಾಗಿಯು, ವಿಭಾಗದ ಮತ್ತು ಆಸ್ಪತ್ರೆಯ ಶ್ರೇಯೋಭಿವೃದ್ಧಿಗಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು.
ಜೆಎಸ್‌ಎಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ವೈದ್ಯರಾದ ಡಾ. ಸುಮಾ ರವರು ಮತ್ತು ಆಸ್ಪತ್ರೆಯ ಹಿರಿಯ ಶುಶ್ರೂಕಿಯಾದ ಶ್ರೀಮತಿ ಸಿಬಿರವರು ಡಾ. ಎ.ಪಿ. ಚಂದ್ರಶೇಖರ್‌ರವರ ಸೇವೆಯನ್ನು ಸ್ಮರಿಸಿಸುತ್ತಾ ಅವರು ಸಹೋದ್ಯೋಗಿಗಳೊಂದಿಗೆ ಮೃದು ಸ್ವಭಾವದಿಂದ ನಡೆದುಕೊಂಡು ಎಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದನ್ನು ನೆನಪಿಸಿಕೊಂಡರು.
ಸಂತಾಪ ಸೂಚನಾ ಸಭೆಯಲ್ಲಿ ಡಾ. ಎ.ಪಿ. ಚಂದ್ರಶೇಖರ್‌ರವರ ಮಗ. ಮಗಳು ಮತ್ತು ಇತರೆ ಕುಟುಂಬ ಸದಸ್ಯರುಗಳು ಹಾಜರಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರುಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾವಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸಿ ದಿವಂಗತರ ಆತ್ಮಕ್ಕೆ ಶಾಂತಿಯನ್ನು ಕೋರಿ ಮತ್ತು ಅವರ ಕುಟುಂಬ ವರ್ಗಕ್ಕೆ ಈ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಪ್ರಾರ್ಥಿಸುತ್ತಾ ಎರಡು ನಿಮಿಷಗಳ ಕಾಲ ಮೌನಾಚರಿಸಲಾಯಿತು.