ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಅಸಮಾನತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ವನ್ನು ಹೋಗಲಾಡಿಸುವ ಉದ್ದೇಶದಿಂದ ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮನುಷ್ಯನು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಅವರ ಆಶಯದಂತೆ ಇಂದಿನ ಜನಾಂಗವು ಅವರ ಗುಣಗಳನ್ನು ಅನುಸರಿಸುವ ಮೂಲಕ ಸಂವಿಧಾನಕ್ಕೆ ಗೌರವ ಸೂಚಿಸಬೇಕು ಎಂದರು.
ಸರ್ವಾಧಿಕಾರ ಧೋರಣೆಯಿಂದ ಪ್ರಜಾಪ್ರಭುತ್ವದ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಆ ದಾರಿಯಲ್ಲಿ ಇಂದಿನ ಕೇಂದ್ರ ಸರ್ಕಾರ ನಡೆಯುತ್ತಿದೆ, ಸಂವಿಧಾನವನ್ನು ವಿರೋಧಿಸುವ ಮೂಲಕ ಸರ್ಕಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ಆಡಳಿತವನ್ನು ಮುಂದಿನ ದಿನಗಳಲ್ಲಿ ಧಿಕ್ಕರಿಸಿ ಎಂದರು.
ಖಡ್ಗದಿಂದ ಚರಿತ್ರೆ ನಿರ್ಮಿಸುವುದಲ್ಲ, ಪೆನ್ನಿನ ಮೂಲಕವು ಚರಿತ್ರೆ ನಿರ್ಮಿಸಬಹುದು ಎಂದು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ. ಆ ಮಾರ್ಗದಲ್ಲಿ ನಾವುಗಳು ನಡೆಯಬೇಕು ಎಂದರು.
ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ ವೆಂಕಟೇಶ್ ಮಾತನಾಡಿ ಜನವರಿ 26 ದೇಶದ ಜನತೆ ಸಂವಿಧಾನವನ್ನು ಕಾನೂನು ಅಂತ ಒಪ್ಪಿಕೊಂಡ ದಿನ, ಆ ದಿನವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಹಬ್ಬದ ರೀತಿ ಆಚರಿಸಬೇಕು. ಅಂಬೇಡ್ಕರ್ ಅವರು ಉತ್ತಮವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಭಾರತ ಸಂವಿಧಾನವು ಇಡೀ ವಿಶ್ವವೇ ಒಪ್ಪುವ ಸಂವಿಧಾನವಾಗಿದ್ದು, ವಿಶ್ವವೇ ಗೌರವಿಸುವ ವ್ಯಕ್ತಿ ಡಾ. ಬಿಆರ್ ಅಂಬೇಡ್ಕರ್ ರವರು. ಇದು ಸಂವಿಧಾನ ಬದಲಿಸುವ ವ್ಯಕ್ತಿಗಳಿಗೆ ಅರ್ಥವಾಗುತ್ತಿಲ್ಲದಿರುವುದು ನಮ್ಮ ದುರಾದೃಷ್ಟಕರ ಎಂದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ ಅಂಬೇಡ್ಕರ್ ಅವರ ಉದ್ದೇಶ ದೇಶದ ಎಲ್ಲಾ ವರ್ಗದವರು ಶಿಕ್ಷಿತರಾಗಬೇಕು. ಭಾರತ ಸಂವಿಧಾನವು ದೇಶದ ರಕ್ಷಾ ಕವಚ ವಾಗಿದ್ದು ಅದನ್ನು ಉಳಿಸುವ ಪ್ರಯತ್ನವಾಗಬೇಕಿದೆ. ಆದರೆ ಕೆಲವು ಕಾಣದ ಕೈಗಳು ದೇಶವನ್ನು ವಿಭಜನೆ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವುಗಳು ಅವಕಾಶ ಮಾಡಿಕೊಡಬಾರದು ಎಂದರು.
ಕೆಪಿಸಿಸಿ ವಕ್ತಾರೆ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ ಹಲಗನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಸಂಘದ ಸದಸ್ಯರುಗಳು ಮುಸ್ಲಿಂ ಬಾಂಧವರೊಂದಿಗೆ ಹೊಂದಾಣಿಕೆಯಿಂದ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆ ಎನಿಸುತ್ತದೆ. ಸಹೋದರತ್ವದ ಭಾವನೆಗಳಿಂದ ಎಲ್ಲಾ ಸಮುದಾಯದವರು ಹಬ್ಬದ ರೀತಿಯಲ್ಲಿ ಆಚರಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಬೃಹತ್ ಮೆರವಣಿಗೆ : ಹಲಗನಹಳ್ಳಿ ಗ್ರಾಮದ ಸುತ್ತ ಅಂಬೇಡ್ಕರ್ ಪ್ರತಿಮೆಯನ್ನು ಪೊಲೀಸರ ಬಂದೋಬಸ್ ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನಬಾಬು, ಡಿ ಟಿ ಸ್ವಾಮಿ, ಹಲಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವೀಣಾ ವೆಂಕಟೇಶ್, ಸದಸ್ಯ ಸುಯೆಲ್ ಪಾಷಾ, ಅಂಬೇಡ್ಕರ್ ಪುತ್ತಳಿ ದಾನಿಗಳಾದ ಪ್ರಶಾಂತ್,ಮುಖಂಡರಾದ ಶಂಕರೇಗೌಡ, ಮರಿಗೌಡ,ಸಂದೇಶ್,ತಹಸಿಲ್ದಾರ್ ನಿಸರ್ಗಪ್ರಿಯ, ಇ ಓ ಸುನಿಲ್ ಕುಮಾರ್, ಹಲಗನಹಳ್ಳಿ ಅಂಬೇಡ್ಕರ್ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.