ಮೈಸೂರು: ಸಂವಿಧಾನದ 73ನೇ ತಿದ್ದುಪಡಿಯ ಮುಖಾಂತರ ಅಸ್ತಿತ್ವಕ್ಕೆ ಬಂದಿರುವ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿ ಕಾರ್ಯ ನಿರ್ವಹಿಸಲು ಪೂರಕವಾದ ವಾತಾವರಣ ಸೃಷ್ಟಿಸಲು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಸಲ್ಲಿಸಲಾಗಿರುವ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯದಾದ್ಯಂತ ನಡೆಸಲಾಗುವ ಕರ್ನಾಟಕ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಇದೇ ತಿಂಗಳ 30ನೇ ತಾರೀಕಿನಂದು ಶನಿವಾರ ಮೈಸೂರು ನಗರದ ಟೌನ್ ಹಾಲ್ ನಲ್ಲಿ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ನಾಗರಾಜು ಯದುನಾಡು ಅವರು ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಗರಾಜು, ಅಂದು ನಡೆಯಲಿರುವ ಅಧ್ಯಕ್ಷರು ಉಪಾಧ್ಯಕ್ಷರುಗಳ ಸಮಾವೇಶದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅವಕಾಶ ನೀಡದೆ ಸುತ್ತೋಲೆಗಳ ಮುಖಾಂತರ ಪಂಚಾಯಿತಿಗಳು ನಿಯಂತ್ರಿಸುತ್ತಿರುವ ಅಧಿಕಾರಿ ವರ್ಗದ ಮತ್ತು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವ ಮೇಲಿನ ಹಂತದ ಚುನಾಯಿತ ಪ್ರತಿನಿಧಿಗಳ ಮನಸ್ಥಿತಿಯನ್ನು ವಿರೋಧಿಸಿ ಕಾನೂನು ಬದ್ಧವಾಗಿ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲು ಒತ್ತಾಯಿಸಿ ಅಭಿಯಾನ ನಡೆಯಲಿದೆ ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷರಾದ ಸತೀಶ್ ಕಾಡಶೆಟ್ಟಿಹಳ್ಳಿ ರವರು ಕರ್ನಾಟಕ ಗ್ರಾಮಸ್ವರಾಜ್ಯ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಜೊತೆಯಲ್ಲಿ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರುವ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಅಭಿನಂದಿನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ತಾಲೂಕು ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಶಾಂತ್ ಚಂದಗಾಲು, ಒಕ್ಕೂಟದ ಮೈಸೂರು ತಾಲೂಕು ಅಧ್ಯಕ್ಷ ಗುರುಮೂರ್ತಿ ಕಾರ್ಯದರ್ಶಿ ಮಹದೇವ್ ಹಾಗೂ ಸಂಘಟನೆಯ ಸಲಹೆಗಾರರಾದ ರಾಜಾ ಹುಣಸೂರು ರವರು ಉಪಸ್ಥಿತರಿದ್ದರು.