ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಹೆಗ್ಗುರುತಾದ ದೊಡ್ಡ ಗಡಿಯಾರ ಸಂರಕ್ಷಣಾ ಕಾರ್ಯಕ್ಕೆ ಬುಧವಾರ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಚಾಲನೆ ನೀಡಿದರು.
ಕೆಲ ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದ್ದ ಪುರಭವನ ಎದುರಿನ ದೊಡ್ಡ ಗಡಿಯಾರವನ್ನು ಮಹಾನಗರ ಪಾಲಿಕೆ, ಪಾರಂಪರಿಕ ಮತ್ತು ಪುರಾತತ್ವ ಇಲಾಖೆ ಸಹಯೋಗದಲ್ಲಿ ಸಂರಕ್ಷಣೆ ಮಾಡುವ ಕಾರ್ಯ ಅರಂಭಗೊಂಡಿದೆ. ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರ ಸಹಕಾರದಲ್ಲಿ ಈ ಕಾಮಗಾರಿ ನಡೆಯಲಿದೆ.
ಮೇಯರ್ ಶಿವಕುಮಾರ್, ಶಾಸಕ ಕೆ.ಹರೀಶ್ ಗೌಡ ಅವರು ಜಂಟಿಯಾಗಿ ಸಂರಕ್ಷಣೆ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಂರಕ್ಷಣಾ ಕಾರ್ಯಕ್ಕೆ ನಗರ ಪಾಲಿಕೆ ಮೊದಲ ಹಂತದಲ್ಲಿ ೪೩ ಲಕ್ಷ ರೂ. ಅನುದಾನ ನೀಡಿದೆ.
ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ರಜತ ಮಹೋತ್ಸವದ ಸ್ಮರಣೆಯಲ್ಲಿ ನಿರ್ಮಿಸಿದ್ದ ದೊಡ್ಡ ಗಡಿಯಾರದ ಕೆಲವು ಭಾಗಗಳು ಶಿಥಿಲಾವಸ್ಥೆ ತಲುಪಿದ್ದವು. ಸಂರಕ್ಷಿಸುವಂತೆ ನಾಗರಿಕರು, ಇತಿಹಾಸ ತಜ್ಞರು ಆಗ್ರಹಪಡಿಸಿದ್ದರು. ಪಾಲಿಕೆಯ ಅನುದಾನದಿಂದ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿzವೆ ಎಂದು ಹೇಳಿದರು.
ದೊಡ್ಡ ಗಡಿಯಾರದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗ್ರತೆಯಿಂದ ಕಾಮಗಾರಿ ನಿರ್ವಹಿಸುವಂತೆ ಪಾರಂಪರಿಕ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಗಡಿಯಾರದ ಒಳಭಾಗದ ಮತ್ತು ಮೇಲ್ಬಾಗದಲ್ಲಿನ ಬಿರುಕು ಸಹಿತವಾಗಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಇತಿಹಾಸ ತಜ್ಞ, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್.ರಂಗರಾಜು ಮಾತನಾಡಿ, ನಿರಂತರ ಪ್ರಯತ್ನದ ಫಲದಿಂದ ದೊಡ್ಡ ಗಡಿಯಾರ ಸಂರಕ್ಷಣೆ ಕಾಮಗಾರಿ ಆರಂಭಗೊಂಡಿದೆ. ಸಂರಕ್ಷಣೆ ಕಾರ್ಯ ಆರಂಭಿಸುವ ಮುನ್ನ ಪ್ರಾಚ್ಯವಸ್ತು ಇಲಾಖೆಯ ಎಂಜಿನಿಯರ್ ಮಹೇಶ್, ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಎಲ್ಲರ ಸಲಹೆ ಸ್ವೀಕರಿಸಲಾಗುವುದು ಎಂದು ನುಡಿದರು.
ಈ ಸಂದರ್ಭ ಉಪ ಮೇಯರ್ ಡಾ.ಜಿ.ರೂಪಾ, ಹಣಕಾಸು ಸ್ಥಾಯಿ ಸಮಿತಿ ಅಧಕ್ಷ ಎಂ.ಡಿ.ನಾಗರಾಜು, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಇದ್ದರು.