ದಾವಣಗೆರೆ: ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಸಿ, ಉತ್ತೇಜನ ನೀಡುವುದೇ ದೀಪ ಸಂಜೀವಿನಿ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಅಯೋಜಿಸಲಾದ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಸದ್ಬಳಕೆ ಮಾಡಿಕೊಳ್ಳಲೆಂದು ಮಾರಾಟ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವಾಗಿದೆ. ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯೆಯರು ತಮ್ಮ ಪರಿಶ್ರಮ ಹಾಗೂ ಸೃಜನಶೀಲತೆಯಿಂದ ವಿವಿಧ ವಿನ್ಯಾಸದ ಆಕರ್ಷಕ ದೀಪಗಳನ್ನು ತಯಾರಿಸಿದ್ದು, ಮಾರುಕಟ್ಟೆ ಒದಗಿಸುವುದು, ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಅವರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಹಬ್ಬಗಳ ಸಂದರ್ಭದಲ್ಲಿ ಜನರು ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು. ಶ್ರೀ ಭಾಗ್ಯಲಕ್ಷ್ಮೀ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ ದೊಡ್ಡಬಾತಿ, ಆರೋಗ್ಯ ಮಾತೆ ಸ್ವ-ಸಹಾಯ ಸಂಘ ಕತ್ತಲಗೆರೆ, ಶ್ರೀ ನಿಸರ್ಗ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ ಶ್ರೀರಾಮನಗರ ಕ್ಯಾಂಪ್, ಕಾಡಜ್ಜಿಯ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಮಾರಾಟ ಮೇಳದಲ್ಲಿ ಭಾಗಿಯಾಗಿದ್ದವು.
ಮಾರಾಟ ಮೇಳದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿರುವ ಮಣ್ಣಿನ ಹಣತೆ, ಕರಕುಶಲ ವಸ್ತುಗಳು ಹಾಗೂ ಸಿಹಿ ತಿನಿಸುಗಳು, ಅಲಂಕಾರಿಕ ವಸ್ತುಗಳು, ಮನೆಬಳಕೆ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎ. ಚನ್ನಪ್ಪ, ಅಭಿಯಾನ ಘಟಕದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಭೋಜರಾಜ ಎನ್.ಎಂ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು