ಚಾಮರಾಜನಗರ: ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆಯ ದುರ್ಗಮ್ಮನ ದೇವಸ್ಥಾನದ ಬಳಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಕ್ಲೀನರ್ ಚಿನ್ನು ಮತ್ತು ಲಾರಿ ಚಾಲಕ ಹಾಗೂ ಮಾಲೀಕ ಪ್ರಕಾಶ್ ಮೃತರು.
ಗುಂಡಾಲ್ ಜಲಾಶಯ ಸಮೀಪದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದು ಹೋಗಿರುವ ಹೈ ಪವರ್ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದೆ. ಈ ವೇಳೆ ಚಿನ್ನು ಹಾಗೂ ಪ್ರಕಾಶ್ ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾದರೂ ಪ್ರಯತ್ನ ವಿಫಲವಾಗಿದೆ. ಹೈ ಪವರ್ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.