ಚಿಂತಾಮಣಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೨೩೪ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪ ಗುರುವಾರ ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಜಖಂಗೊಂಡು ಕ್ಯಾಂಟರ್ ಚಾಲಕ ಗಾಯಗೊಂಡಿದ್ದಾನೆ.
ಆಲೂಗಡ್ಡೆ ತುಂಬಿಸಿಕೊಂಡು ಆಗ್ರಾದಿಂದ ನಗರದ ಎಪಿಎಂಸಿಗೆ ಬರುತ್ತಿದ್ದ ಲಾರಿ ಬೆಳಗಿನ ಜಾವ ಸುಮಾರು ೪ ಗಂಟೆ ಸಮಯದಲ್ಲಿ ಚಾಲಕ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಶೌಚಕ್ಕೆ ಹೋಗಿದ್ದಾನೆ. ಅದೇ ಸಮಯದಲ್ಲಿ ತುಮಕೂರಿನಿಂದ ಕೋಳಿ ಫೀಡ್ ತುಂಬಿಸಿಕೊಂಡು ಕೋಲಾರ ಜಿಲ್ಲೆಯ ಮುಳಬಾಗಿಲು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಕ್ಯಾಂಟರ್ ಡಿಕ್ಕಿಯ ರಭಸಕ್ಕೆ ಲಾರಿ ರಸ್ತೆಬದಿಯಿಂದ ಪಕ್ಕದ ಹಳ್ಳಕ್ಕೆ ಇಳಿದಿದೆ. ಲಾರಿಯ ಹಿಂಭಾಗದ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಕ್ಯಾಂಟರ್ ವಾಹನದ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕ ಸಾಧಿಕ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ಗೊತ್ತಾದ ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.